ಮೀನುಗಾರರಿಗೆ ಕಲ್ಯಾಣ ಮಂಡಳಿ ರಚನೆ ಆಗ್ರಹಿಸಿ ಮನವಿ
ಉಡುಪಿ, ಡಿ.15: ಮೀನುಗಾರರಿಗೆ ಮತ್ತು ಮೀನು ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘವು ಇಂದು ಉಡುಪಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಮೀನುಗಾರರಿಗೆ ಮತ್ತು ಮೀನು ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಿ, ಆ ಮೂಲಕ ನಿವೇಶನ, ವಸತಿ, ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳ ಮದುವೆಗೆ ಸಹಾಯ, ವಿದ್ಯಾಭ್ಯಾಸ ಮುಗಿದ ಬಳಿಕ ಉದ್ಯೋಗ ಮತ್ತು 55 ವರ್ಷ ಮೇಲ್ಪಟ್ಟ ವರಿಗೆ ಪಿಂಚಣಿ ನೀಡಲು ವ್ಯವಸ್ಥೆ ಮಾಡಬೇಕು. ಸಿಆರ್‌ಝೆಡ್ ಹೆಸರಿನಲ್ಲಿ ಸಮುದ್ರ ತೀರದಲ್ಲಿ ವಾಸ ಮಾಡುವವರಿಗೆ ಆಗುವ ತೊಂದರೆಗಳನ್ನು ನಿವಾರಣೆ ಮಾಡಬೇಕು. ಅಪಘಾತ ಸಂಭವಿಸಿದಲ್ಲಿ ಪರಿಹಾರ, ಕರಾವಳಿ ಉದ್ದಕ್ಕೂ ಕೇರಳದ ಮಾದರಿಯಂತೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಶಂಕರ್, ಕಾರ್ಯದರ್ಶಿ ನಾಗೇಶ್ ತಿಂಗಳಾಯ, ಟೈಗರ್ ವಾಸು ಕಾಂಚನ್, ರಾಮ ಖಾರ್ವಿ, ಮುಕುಂದ ಖಾರ್ವಿ, ವಿದ್ಯಾರಾಜ್, ರತ್ನಾಕರ ಉಪಸ್ಥಿತರಿದ್ದರು.





