ಮಧ್ಯಪ್ರದೇಶದ ನ್ಯಾಯಾಧೀಶರನ್ನು ಲೈಂಗಿಕ ಕಿರುಕುಳದ ಆರೋಪಗಳಿಂದ ಖುಲಾಸೆಗೊಳಿಸಿದ ರಾಜ್ಯಸಭಾ ಸಮಿತಿ

ಹೊಸದಿಲ್ಲಿ,ಡಿ.15: ಗ್ವಾಲಿಯರ್‌ನಲ್ಲಿ ಮಹಿಳಾ ನ್ಯಾಯಾಧೀಶರೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪವನ್ನು ಎದುರಿಸುತ್ತಿದ್ದ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶ ಎಸ್.ಕೆ.ಗಂಗೇಲಿ ಅವರನ್ನು ರಾಜ್ಯಸಭಾ ಸಮಿತಿಯೊಂದು ಖುಲಾಸೆಗೊಳಿಸಿದೆ. ಸಮಿತಿಯ ವರದಿಯನ್ನು ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
2015,ಎಪ್ರಿಲ್‌ನಲ್ಲಿ ನ್ಯಾ.ಗಂಗೇಲಿ ಅವರನ್ನು ದೋಷಾರೋಪಣೆಗೊಳಪಡಿಸಲು ಗೊತ್ತುವಳಿಯನ್ನು 58 ಸದಸ್ಯರು ಬೆಂಬಲಿಸಿದ ಬಳಿಕ ಆಗಿನ ರಾಜ್ಯಸಭಾ ಸಭಾಪತಿ ಹಾಮಿದ್ ಅನ್ಸಾರಿ ಅವರು ನ್ಯಾಯಾಧೀಶರ ವಿಚಾರಣಾ ಕಾಯ್ದೆ,1968ರಡಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶೆ ಆರ್.ಭಾನುಮತಿ, ನ್ಯಾ.ಮಂಜುಳಾ ಚೆಲ್ಲೂರ್ ಮತ್ತು ಹಿರಿಯ ನ್ಯಾಯವಾದಿ ಕೆ.ವಿ.ವೇಣುಗೋಪಾಲ್ ಅವರನ್ನೊಳ ಗೊಂಡ ಸಮಿತಿಯನ್ನು ರಚಿಸಿದ್ದರು. ಸಮಿತಿಯು ನ್ಯಾ.ಗಂಗೇಲಿ ವಿರುದ್ಧದ ಆರೋಪಗಳ ಕುರಿತು ವಿಚಾರಣೆ ನಡೆಸಿತ್ತು.
ದೋಷಾರೋಪಣೆಗಾಗಿ ಮೂರು ದುರ್ವರ್ತನೆಗಳನ್ನು ಗೊತ್ತುವಳಿಯಲ್ಲಿ ಪಟ್ಟಿ ಮಾಡಲಾಗಿತ್ತು. ಮಹಿಳಾ ನ್ಯಾಯಾಧೀಶರಿಗೆ ಲೈಂಗಿಕ ಕಿರುಕುಳ, ತನ್ನ ಬೇಡಿಕೆಗೆ ಮಣಿಯದಿದ್ದಕ್ಕಾಗಿ ಅವರನ್ನು ಬಲಿಪಶುವನ್ನಾಗಿ ಮಾಡಿದ್ದು ಮತ್ತು ಅವರನ್ನು ಗ್ವಾಲಿಯರ್‌ನಿಂದ ಸಿಧಿಗೆ ವರ್ಗಾಯಿಸಲು ಉಚ್ಚ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರಾಗಿ ತನ್ನ ಅಧಿಕಾರದ ದುರುಪಯೋಗ ಈ ಆರೋಪಗಳನ್ನು ನ್ಯಾ.ಗಂಗೇಲಿ ವಿರುದ್ಧ ಹೊರೆಸಲಾಗಿತ್ತು.
ಲೈಂಗಿಕ ಕಿರುಕುಳದ ಆರೋಪ ಸಂಶಯಾತೀತವಾಗಿ ಸಾಬೀತಾಗಿಲ್ಲ ಎಂದು ಹೇಳಿರುವ ವರದಿಯು, ಮಹಿಳಾ ನ್ಯಾಯಾಧೀರನ್ನ್ನು ವರ್ಗಾವಣೆಗೊಳಿಸಿದ್ದ ವರ್ಗಾವಣೆ ಸಮಿತಿಯ ನಡೆ ಅಕ್ರಮವಾಗಿದೆ. ತಪ್ಪು ಕಾರಣಗಳಿಂದಾಗಿ ಈ ವರ್ಗಾವಣೆಯನ್ನು ಮಾಡಲಾಗಿತ್ತು. ಆ ಸಂದರ್ಭ ಮಹಿಳಾ ನ್ಯಾಯಾಧೀಶರ ಮಗು 12ನೇ ತರಗತಿಯ ಪರೀಕ್ಷೆಗೆ ಸಜ್ಜಾಗುತ್ತಿದ್ದು, ಬೇರೆ ದಾರಿಯಿಲ್ಲದೆ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂದು ಹೇಳಿದೆ. ನ್ಯಾಯದ ಹಿತಾಸಕ್ತಿಯ ದೃಷ್ಟಿಯಿಂದ ದೂರುದಾರರು ಸೇವೆಗೆ ಮರಳಲು ಬಯಸಿದರೆ ಅವರನ್ನು ಮರುನೇಮಕ ಮಾಡಿಕೊಳ್ಳಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ದೂರುದಾರರಿಗೆ ಕಿರುಕುಳ ನೀಡಲು ನ್ಯಾ.ಗಂಗೇಲಿ ಕೆಳ ನ್ಯಾಯಾಂಗದ ದುರುಪಯೋಗವನ್ನು ಮಾಡಿಕೊಂಡಿದ್ದರು ಎಂಬ ಆರೋಪದಲ್ಲಿಯೂ ಹುರುಳಿಲ್ಲ ಎಂದು ವರದಿಯು ಹೇಳಿದೆ.







