ತಲೆಮರೆಸಿಕೊಂಡಿರುವ ಮಧ್ಯಪ್ರದೇಶ ಸಚಿವನಿಂದ ಡಿಜಿಪಿ, ಒಎಸ್‌ಡಿ ಭೇಟಿ: ಕಾಂಗ್ರೆಸ್ ಆರೋಪ

ಭೋಪಾಲ,ಡಿ.15: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿರುವ ತನ್ನ ಸಂಪುಟ ಸಹೋದ್ಯೋಗಿ ಲಾಲ್ ಸಿಂಗ್ ಆರ್ಯರನ್ನು ರಕ್ಷಿಸುತ್ತಿದ್ದಾರೆ ಎಂದು ಶುಕ್ರವಾರ ಆರೋಪಿಸಿದ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ, ಕಾಂಗ್ರೆಸ್‌ನ ಅಜಯ್ ಸಿಂಗ್ ಅವರು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ತಲೆ ಮರೆಸಿಕೊಂಡಿರುವ ಆರ್ಯ ಮಂತ್ರಾಲಯದ ಮುಖ್ಯಮಂತ್ರಿಗಳ ಕೊಠಡಿಯ ಆ್ಯಂಟಿ ಚೇಂಬರ್‌ನಲ್ಲಿ ಡಿಜಿಪಿ ಮತ್ತ್ತು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿ ಕಾರಿ(ಒಎಸ್‌ಡಿ)ಯನ್ನು ಭೇಟಿಯಾಗಿರುವುದು ವರದಿಯಾಗಿದೆ. ಮುಖ್ಯಮಂತ್ರಿಗಳ ಅನುಮತಿಯಿಲ್ಲದೆ ಇಂತಹ ಭೇಟಿ ಸಾಧ್ಯವಿಲ್ಲ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಉನ್ನತ ಅಧಿಕಾರಿಗಳೊಂದಿಗೆ ಆರ್ಯರ ಭೇಟಿಯು ಅವರನ್ನು ರಕ್ಷಿಸುವ ಕ್ರಿಮಿನಲ್ ಒಳಸಂಚಿನ ಭಾಗವಾಗಿರುವಂತಿದೆ ಎಂದು ಅವರು ಆರೋಪಿಸಿದರು.
ಆರ್ಯರನ್ನು ಪತ್ತೆ ಹಚ್ಚುವ ಪೊಲೀಸರ ಪ್ರಯತ್ನಗಳು ಮತ್ತು ಇತ್ತೀಚಿಗೆ ಅವರ ಅಧಿಕೃತ ನಿವಾಸದ ಮೇಲಿನ ದಾಳಿ ಕೇವಲ ನಾಟಕವಾಗಿದೆ ಎಂದು ಸಿಂಗ್ ಬಣ್ಣಿಸಿದರು.
ಭಿಂಡ್‌ನ ವಿಶೇಷ ನ್ಯಾಯಾಲಯವು ಡಿ.5ರಂದು ಆರ್ಯ ವಿರುದ್ಧ ಜಾಮೀನು ರಹಿತ ವಾರಂಟ್‌ನ್ನು ಹೊರಡಿಸಿ, ಮುಂದಿನ ವಿಚಾರಣಾ ದಿನಾಂಕವಾದ ಡಿ.19ರೊಳಗೆ ಅದನ್ನು ಕಾರ್ಯಗತಗೊಳಿಸುವಂತೆ ಪೊಲೀಸರಿಗೆ ಆದೇಶಿಸಿತ್ತು.
ಆರ್ಯ ಅವರು ಭೂತಾನದ ಮಾದರಿಯಲ್ಲಿ ರಾಜ್ಯ ಸರಕಾರವು ಸೃಷ್ಟಿಸಿರುವ ‘ಸಂತೋಷ ಇಲಾಖೆ’ಯ ಸಚಿವರಾಗಿದ್ದಾರೆ.







