ಕಾಶ್ಮೀರ ಕಣಿವೆಯಲ್ಲಿ ರ‍್ಯಾಲಿ: ಹುರಿಯತ್ ಉನ್ನತ ನಾಯಕರು ವಶಕ್ಕೆ

ಶ್ರೀನಗರ, ಡಿ. 15: ಜಾಯಿಂಟ್ ರೆಸಿಸ್ಟೆಂಟ್ ಲೀಡರ್‌ಶಿಪ್ (ಜೆಆರ್‌ಎಲ್) ನಿಂದ ಪ್ರತ್ಯೇಕತಾವಾದಿಗಳು ಶುಕ್ರವಾರ ನಡೆಸಲು ಉದ್ದೇಶಿಸಿದ ರ‍್ಯಾಲಿಯ ಗಂಟೆಗಳ ಮುನ್ನ ಪೊಲೀಸರು ಹಲವು ಪ್ರತ್ಯೇಕತಾವಾದಿ ನಾಯಕರು ಹಾಗೂ ಹೋರಾಟಗಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರೀನಗರ ಜಿಲ್ಲೆಯ ಅನಂತ್‌ನಾಗ್ ಹಾಗೂ 6 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶ್ರೀನಗರದ ಮೈಸುಮಾ ಹಾಗೂ ಕ್ರಾಲ್‌ಖುಡ್ ಪೊಲೀಸ್ ಠಾಣಾ ವ್ಯಾಪ್ತಿಯ ಭಾಗಶಃ ಪ್ರದೇಶಗಳಲ್ಲಿ ಹಾಗೂ ರೈನ್‌ವಾರಿ, ನೌಹಟ್ಟಾ, ಎಂ.ಆರ್. ಗುಂಜ್, ಸಫಾ ಕಡಲ್ ವ್ಯಾಪ್ತಿಯ ಪ್ರದೇಶಗಳಲ್ಲಿ ನಿಷೇಧಾಜ್ಞೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಸೈಯದ್ ಅಲಿ ಗಿಲಾನಿ, ಮಿರ್ವೈಜ್ ಉಮರ್ ಫಾರೂಕ್ ಹಾಗೂ ಮುಹಮ್ಮದ್ ಯಾಸಿನ್ ಮಲಿಕ್ ನೇತೃತ್ವದ ಪ್ರತ್ಯೇಕತಾವಾದಿ ಸಂಘಟನೆ ಜೆಐರ್‌ಎಲ್ ತನ್ನ ಸಾರ್ವಜನಿಕ ಔಟ್‌ರೀಚ್ ಕಾರ್ಯಕ್ರಮದ ಹಿನ್ನಲೆಯಲ್ಲಿ ಅನಂತ್‌ನಾಗ್‌ನ ಲಾಲ್‌ಚೌಕದಲ್ಲಿ ಸಭೆ ಸೇರಲು ಕರೆ ನೀಡಿತ್ತು.
ಪೊಲೀಸರು ಬಿಲಾಲ್ ಸಿದ್ದೀಕಿ, ವೌಲ್ವಿ ಬಶೀರ್ ಇರ್ಫಾನಿ, ಮುಹಮ್ಮದ್ ಯಾಸಿನ್ ಅಟೈ ಹಾಗೂ ಸೈಯದ್ ಇಮ್ತಿಯಾಜ್ ಹೈದರ್ ಸೇರಿದಂತೆ ಹುರಿಯತ್ ನಾಯಕರು ಹಾಗೂ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯ ನಾಯಕರಾದ ಮಹಮ್ಮದ್ ಅಶ್ರಫ್ ಸೆಹರಾಯ್ ಹಾಗೂ ಮುಹಮ್ಮದ್ ಅಶ್ರಫ್ ಲಾಯಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.







