ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ; ಪೂರ್ವಭಾವಿ ಸಭೆ

ಉಡುಪಿ, ಡಿ.15: ತಮ್ಮ ರಾಜ್ಯ ಪ್ರವಾಸದ ಅವಧಿಯಲ್ಲಿ ಮುಂದಿನ ಜ.8ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯ ಸರಕಾರ ಜಾರಿ ಗೊಳಿಸಿದ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಸಂಬಂಧ ಹಾಗೂ ವಿವಿಧ ಯೋಜನೆಗಳ ಶಿಲಾನ್ಯಾಸ ಸಂಬಂಧ ಆಯೋಜಿಸಲಾಗಿರುವ ರಾಜ್ಯ ಪ್ರವಾಸದ ವೇಳೆ ಉಡುಪಿ ಜಿಲ್ಲೆಯ ಬೈಂದೂರು, ಕಾಪು ಹಾಗೂ ಉಡುಪಿಯಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ವಿವಿಧ ಹೊಣೆಗಳನ್ನು ಹಂಚಲಾಯಿತು.
ಸರಕಾರದ ಸಾಧನೆ ಸಂಭ್ರಮಕ್ಕೆ ಸಂಬಂಧಿಸಿದ ಮಾಹಿತಿ ಪುಸ್ತಕಗಳು ಅಧಿಕಾರಿಶಾಹಿ ಭಾಷೆಯಿಂದ ಹೊರಬಂದು ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಮೂಡಿಬರಬೇಕೆಂದು ಪ್ರಮೋದ್ ತಿಳಿಸಿದರು.
ಜಿಲ್ಲೆ ಅಭಿವೃದ್ಧಿಗೆ ಹಲವು ರೂ. ಕೋಟಿ ಅನುದಾನವನ್ನು ಮುಖ್ಯಮಂತ್ರಿ ಗಳು ಬಿಡುಗಡೆ ಮಾಡಿದ್ದು, ಸರಕಾರದ ಅನ್ನಬಾಗ್ಯ, ಕ್ಷೀರಬಾಗ್ಯ, ವಿದ್ಯಾಸಿರಿ, ಕ್ಷೀರಧಾರೆ, ಕೃಷಿಭಾಗ್ಯ, ಮನಸ್ವಿನಿ, ಮೈತ್ರಿಯಂತಹ ಯೋಜನೆಗಳು ಯಶಸ್ವಿ ಯಾಗಿವೆ. ಜನಪರ ಸರಕಾರದ ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವೂ ಇದಾಗಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮ ಆಯೋಜನೆಯ ಕುರಿತಂತೆ ಪ್ರಮುಖ ನಿರ್ದೇಶನಗಳನ್ನು ಸಚಿವರು ಅಧಿಕಾರಿಗಳಿಗೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಓ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ ಸೇರಿದಂತೆ ಎಲ್ಲಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.







