ಬಂಟ್ವಾಳ: ಧಾರ್ಮಿಕ ನಂಬಿಕೆಗೆ ಅಪಮಾನ; ಆರೋಪಿ ಸೆರೆ

ಬಂಟ್ವಾಳ, ಡಿ.15: ಸಾಮಾಜಿಕ ಜಾಲತಾಣದಲ್ಲಿ ಪವಿತ್ರ ಮಕ್ಕಾ ಚಿತ್ರದಲ್ಲಿ ಆಂಜನೇಯ ಫೋಟೊವನ್ನು ಚಿತ್ರಿಸಿ ಪೋಸ್ಟ್ ಮಾಡಿರುವ ಆರೋಪದ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಯುವಕನೋರ್ವನನ್ನು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತನನ್ನು ಕಡೇಶಿವಾಲಯದ ನಿವಾಸಿ ಸುರೇಶ್ ಎಂದು ಗುರುತಿಸಲಾಗಿದೆ.
ಆತ ಪವಿತ್ರ ಮಕ್ಕಾ ಚಿತ್ರದಲ್ಲಿ ಆಂಜನೇಯ ಫೋಟೊವನ್ನು ಬಳಸಿ ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ನಲ್ಲಿ ಬಳಸುವ ಮೂಲಕ ಪವಿತ್ರ ಸ್ಥಳದ ನಂಬಿಕೆಯನ್ನು ಅಪಮಾನಗೊಳಿಸಿದ್ದಾನೆ ಎಂದು ಬುಡೋಳಿ ನಿವಾಸಿ ಅಶ್ರಫ್ ಎಂಬವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಸಂಜೆ ಆರೋಪಿಯನ್ನು ಬಂಧಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.
ಖಂಡನೆ: ಹಿಂದೂ-ಮುಸ್ಲಿಂ ಧರ್ಮದ ಸೌಹಾರ್ದತೆಗೆ ಭಂಗವುಂಟು ಮಾಡುವ ಉದ್ದೇಶದಿಂದ ಪವಿತ್ರ ಸ್ಥಳದ ನಂಬಿಕೆಯನ್ನು ಅಪಮಾನಗೊಳಿಸಿರುವುದು ಖಂಡನೀಯ. ಮತೀಯ ಭಾವನೆಗಳಿಗೆ ಅಘಾತವನ್ನುಂಟು ಮಾಡುವ ಉದ್ದೇಶದಿಂದ ಸಾಮಾಜಿಕ ತಾಣಗಳಲ್ಲಿ ಅಳವಡಿಸಿರುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಮುಖಂಡ ಹಾರೂನ್ ರಶೀದ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.







