ಕ್ರೈಸ್ತ ಧರ್ಮಗುರುಗಳ ಮೇಲೆ ಬಜರಂಗದಳ ಕಾರ್ಯಕರ್ತರ ಹಲ್ಲೆ: ಆರೋಪ
ಮತಾಂತರ ನಡೆಸುತ್ತಿದ್ದ ಶಂಕೆ

ಭೋಪಾಲ್, ಡಿ.15: ಮತಾಂತರ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಶಂಕಿತ ಬಜರಂಗದಳದ ಕಾರ್ಯಕರ್ತರು ಎನ್ನಲಾದ ಯುವಕರು 10 ಧರ್ಮಗುರುಗಳೂ ಸೇರಿದಂತೆ ಹಲವಾರು ಕ್ರಿಶ್ಚಿಯನ್ನರ ಮೇಲೆ ಹಲ್ಲೆ ನಡೆಸಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ಸಾತ್ನ ಜಿಲ್ಲೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಗುರುತು ಪತ್ತೆಯಾಗದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಸಿವಿಲ್‌ಲೈನ್ಸ್ ಪೊಲೀಸ್ ಠಾಣೆಯ ಎಸ್ಸೈ ಮೋಹಿನಿ ಶರ್ಮ ತಿಳಿಸಿದ್ದಾರೆ. ಆದರೆ ಕೆಥೊಲಿಕ್ ಸಮುದಾಯದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.
ಪೊಲೀಸ್ ಠಾಣೆಯ ಹೊರಗೆ ಅವರ ಮೇಲೆ ಹಲ್ಲೆ ನಡೆಸಿರಬಹುದು. ಆದರೆ ಹಲ್ಲೆ ನಡೆಸಿರುವ ಬಗ್ಗೆ ಅವರು ದೂರು ನೀಡಿದರೆ ಆಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಬಹುದು ಎಂದು ಪೊಲೀಸರು ಹೇಳಿದ್ದಾರೆ.
ಜಿಲ್ಲಾ ಕೇಂದ್ರಸ್ಥಾನದಿಂದ 15 ಕಿ.ಮೀ. ದೂರದಲ್ಲಿರುವ ಭೂಮ್‌ಕರ್ ಎಂಬ ಗ್ರಾಮದಲ್ಲಿ ಗುರುವಾರ ನಡೆಯುತ್ತಿದ್ದ ಕ್ರಿಸ್‌ಮಸ್ ಪೂರ್ವಭಾವಿ ಆಚರಣೆ ಕಾರ್ಯಕ್ರಮಕ್ಕೆ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಕೆಲವು ಯುವಕರು ಅಡ್ಡಿಪಡಿಸಿದ್ದಾರೆ. ಇಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ದಾಂಧಲೆ ನಡೆಸಿದ್ದಾರೆ ಎಂದು ಸಾತ್ನ ಕ್ರೈಸ್ತ್ತ ಧರ್ಮಪ್ರಾಂತ್ಯದ ಸಮಾಜಸೇವಾ ವಿಭಾಗದ ನಿರ್ದೇಶಕ ಫಾದರ್ ಎಂ.ರೋನಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಉತ್ತರ ಭಾರತದ ಸಿರೊ-ಮಲಬಾರ್ ಚರ್ಚ್‌ನ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಏರ್ಪಡಿಸಲಾಗಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ಧರ್ಮಗುರುಗಳನ್ನು (ಪಾದ್ರಿ) ಹಾಗೂ 32 ಶಿಕ್ಷಾಣಾರ್ಥಿ(ತರಬೇತಿ ಪಡೆಯುತ್ತಿರುವ) ಧರ್ಮಗುರುಗಳನ್ನು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಕರೆದೊಯ್ದರು.
ಠಾಣೆಯ ಆವರಣದಲ್ಲಿ ಬಜರಂಗ ದಳದ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ನಾಲ್ವರು ಧರ್ಮಗುರುಗಳ ಮೇಲೂ ಹಲ್ಲೆ ನಡೆಸಲಾಯಿತು ಮತ್ತು ಅವರ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ಫಾದರ್ ರೋನಿ ಆರೋಪಿಸಿದ್ದಾರೆ.
ಡಿ.10ರಂದು ತನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ ಎಂದು ಸ್ಥಳೀಯ ಯುವಕ ಧರ್ಮೇಂದ್ರ ದೋಹರ್ ಎಂಬಾತ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೆಥೊಲಿಕ್ ಧರ್ಮಗುರು ಜಾರ್ಜ್ ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವಿಲ್‌ಲೈನ್ಸ್ ಪೊಲೀಸ್ ಠಾಣೆಯ ಎಸ್ಸೈ ಮೋಹಿನಿ ಶರ್ಮ ತಿಳಿಸಿದ್ದಾರೆ.
ಆದರೆ ಕಳೆದ 20 ವರ್ಷದಿಂದ ಸಾತ್ನ ಜಿಲ್ಲೆಯ ಬರಕಲ ಗ್ರಾಮದಲ್ಲಿ ಕೆಥೊಲಿಕ್ ಸೆಮಿನರಿ ಕಾರ್ಯಾಚರಿಸುತ್ತಿದ್ದು ಇದುವರೆಗೆ ಮತಾಂತರಗೊಳಿಸಿದ ಯಾವುದೇ ಆರೋಪ ಕೇಳಿಬಂದಿಲ್ಲ. ನಮಗೆ ಅನವಶ್ಯಕವಾಗಿ ಪೀಡನೆ ನೀಡಲಾಗುತ್ತಿದೆ. ದೋಹರ್ ಎಂಬ ವ್ಯಕ್ತಿ ಯಾರೆಂಬುದೇ ತನಗೆ ತಿಳಿದಿಲ್ಲ ಎಂದು ಫಾದರ್ ರೋನಿ ತಿಳಿಸಿದ್ದಾರೆ.







