ಪ್ರಚೋದನಾಕಾರಿ ಹೇಳಿಕೆ: ತೆಲಂಗಾಣ ಬಿಜೆಪಿ ಶಾಸಕ ಠಾಕೂರ್, ಶ್ರೀರಾಮಸೇನೆ ಮುತಾಲಿಕ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್

ಪ್ರಮೋದ್ ಮುತಾಲಿಕ್
ಯಾದಗಿರಿ, ಡಿ. 15: ನಗರದಲ್ಲಿ ಇತ್ತೀಚೆಗೆ ಶ್ರೀರಾಮಸೇನೆ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾವೇಶದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ತೆಲಂಗಾಣ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್, ಆಂದೋಲಾ ಕರುಣೇಶ್ವರಿ ಮಠದ ಸಿದ್ಧಲಿಂಗಸ್ವಾಮಿ, ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಪಾಟೀಲ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಮೇಲ್ಕಂಡ ನಾಲ್ವರ ಮೇಲೆ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದು, ಸಮಾವೇಶದಲ್ಲಿ ಗಲಭೆಗೆ ಪ್ರಚೋದನೆ ನೀಡುವಂತಹ ಭಾಷಣ ಮಾಡಿದ್ದಾರೆ. ಅಸ್ತ್ರ, ಆಯುಧ ಬಳಕೆ ಕುರಿತು ಯುವಕರನ್ನು ಪ್ರಚೋದಿಸಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಐಪಿಸಿ ಕಲಂ 143, 145, 147, 149, 153-ಎ ಹಾಗೂ 251 ಎಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ನಗರದಲ್ಲಿ ಡಿ.12ರಂದು ವಿಶ್ವ ಹಿಂದೂ ಸಮಾವೇಶ ನಡೆಸಲು ಶ್ರೀರಾಮಸೇನೆ ಡಿ.10ರಂದು ಪೊಲೀಸರಿಗೆ ಅನುಮತಿ ಕೋರಿತ್ತು. ಆದರೆ, ಅಂದೇ ಜಿಲ್ಲೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆಯುವ ಹಿನ್ನೆಲೆಯಲ್ಲಿ, ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು.
ಪೊಲೀಸರ ಕ್ರಮ ಖಂಡಿಸಿ ಶ್ರೀರಾಮಸೇನೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಅನುಮತಿ ಕೋರಿತ್ತು. ಪರಿಶೀಲಿಸಿದ ನಂತರ ಪೊಲೀಸರು ಸಮಾವೇಶಕ್ಕೆ ಅನುಮತಿ ನೀಡಿದ್ದರು. ಡಿ.12ರಂದು ಸಂಜೆ ನಗರದ ವನಿಕೇರಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಶಾಸಕ ರಾಜಾಸಿಂಗ್ ಠಾಕೂರ್, ಪ್ರಮೋದ್ ಮುತಾಲಿಕ್ ಸೇರಿ ಎಲ್ಲ ಮುಖಂಡರು ಕೋಮುಗಲಭೆಯಂತಹ ಘಟನೆಗಳಿಗೆ ಪ್ರಚೋದನೆ ನೀಡುವಂತೆ ಭಾಷಣ ಮಾಡಿದ್ದರು.
‘ಆಯುಧ, ಅಸ್ತ್ರ ಬಳಸಬೇಕೆಂಬ ಪ್ರಚೋದನಕಾರಿ ಹೇಳಿಕೆ ಸರಿಯಲ್ಲ. ಇದು ಕಾನೂನು ಉಲ್ಲಂಘನೆಯಾಗಲಿದೆ. ಆದುದರಿಂದ ನಗರ ಠಾಣಾ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುವುದು’
-ಮಾರ್ಟಿನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾದಗಿರಿ
‘ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಶ್ರೀರಾಮಸೇನೆ ಮುಖಂಡರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ, ಕಾನೂನು ಕ್ರಮಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’
-ಪ್ರಿಯಾಂಕ್ ಖರ್ಗೆ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ







