ವಿವಿಪಿಎಟಿ-ಇವಿಎಂ ಫಲಿತಾಂಶ ಹೋಲಿಸಲು ಕೋರಿ ಸಲ್ಲಿಸಿದ ಕಾಂಗ್ರೆಸ್ ಮನವಿ ತಿರಸ್ಕೃತ

ಹೊಸದಿಲ್ಲಿ, ಡಿ. 15: ಗುಜರಾತ್‌ನಲ್ಲಿ ಡಿಸೆಂಬರ್ 9 ಹಾಗೂ 14ರಂದು ನಡೆದ ಎರಡು ಹಂತದ ಮತದಾನದಲ್ಲಿ ಬಳಸಲಾಗಿದ್ದ ಕನಿಷ್ಠ ಶೇ. 20 ಇವಿಎಂಗಳ ಫಲಿತಾಂಶವನ್ನು ವಿವಿಪಿಎಟಿಯೊಂದಿಗೆ ಹೋಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂಬ ಗುಜರಾತ್ ಕಾಂಗ್ರೆಸ್‌ನ ಮನವಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಚುನಾವಣಾ ಆಯೋಗದ ನಿರ್ಧಾರ ನಿರಂಕುಶ ಅಥವಾ ಕಾನೂನಿಗೆ ಅನುಗುಣವಾಗಿ ಇಲ್ಲ ಎಂಬುದನ್ನು ನೀವು ಪ್ರಮಾಣೀಕರಿಸದೇ ಇದ್ದರೆ, ಚುನಾವಣಾ ಆಯೋಗದ ನಿರ್ಧಾರವನ್ನು ನಾವು ಬದಲಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಹೇಳಿದೆ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಬೇರಿ ಬಾರಿಸಲಿದೆ; ಇದರಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಹಾಗೂ ಗುಜರಾತ್‌ನಲ್ಲಿ ಬಿಜೆಪಿ ನಿರಂತರ ಆರನೇ ಅವಧಿಯೂ ಅಧಿಕಾರಕ್ಕೆ ಬರಲಿದೆ ಎಂದು ಟಿ.ವಿ. ವಾಹಿನಿಗಳ ಮತದಾನೋತ್ತರ ಸಮೀಕ್ಷೆ ಹೇಳಿದ ಬಳಿಕ ಕಾಂಗ್ರೆಸ್ ಈ ಮನವಿ ಸಲ್ಲಿಸಿದೆ.
ದೂರುದಾರರ ಆಂತಕಕ್ಕೆ ಸಮರ್ಥನೆ ಇಲ್ಲದೇ ಇದ್ದರೆ ಚುನಾವಣಾ ಆಯೋಗದ ನಿರ್ಧಾರವನ್ನು ನಿರಾಕರಿಸುವುದು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ದೂರುದಾರ ಜಿಪಿಸಿಸಿ ಕಾರ್ಯದರ್ಶಿ ಮುಹಮ್ಮದ್ ಆರೀಫ್ ರಜಪೂತ್ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಗ್ವಿ ಹಾಜರಾಗಿ ಒಂದು ಕ್ಷೇತ್ರದಲ್ಲಿ ಒಂದು ಬೂತ್ ನ ವಿವಿಪಿಎಟಿ ಹೋಲಿಕೆ ಮಾಡುವ ಚುನಾವಣಾ ಆಯೋಗದ ನಿರ್ಧಾರ ಕಣ್ಣೊರೆಸುವ ತಂತ್ರ ಎಂದರು.
ಮನವಿ ಹಿಂದೆಗೆಯುವಂತೆ ಹಾಗೂ ಮತದಾನ ಪರಿಷ್ಕರಿಸಲು ಹೊಸ ಮನವಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತು.







