ಕೇಂದ್ರ ಸರಕಾರದ 2014ರ ತಿದ್ದುಪಡಿ ಅಧಿನಿಯಮ ರದ್ದು : ಹೈಕೋರ್ಟ್
ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಚಿತ್ರಾತ್ಮಕ ಎಚ್ಚರಿಕೆ

ಬೆಂಗಳೂರು, ಡಿ.15: ಸಿಗರೇಟ್ ಸೇರಿ ಇತರೆ ತಂಬಾಕು ಉತ್ಪನ್ನಗಳ ಪೊಟ್ಟಣದ ಮೇಲೆ ಶೇ.85ರಷ್ಟು ಜಾಗದಲ್ಲಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಚಿತ್ರಾತ್ಮಕ ಎಚ್ಚರಿಕೆ ಸಂದೇಶ ಪ್ರಕಟಿಸುವ ಸಂಬಂಧ ಕೇಂದ್ರ ಸರಕಾರವು 2014ರಲ್ಲಿ ರೂಪಿಸಿದ್ದ ತಿದ್ದುಪಡಿ ಅಧಿನಿಯಮವನ್ನು ಹೈಕೋರ್ಟ್ ರದ್ದುಪಡಿಸಿ ಮಹತ್ವದ ತೀರ್ಪು ನೀಡಿದೆ.
2014ರಲ್ಲಿ ರೂಪಿಸಿದ್ದ ತಿದ್ದುಪಡಿ ಅಧಿನಿಯಮ ಪ್ರಶ್ನಿಸಿ ದೇಶದ ವಿವಿಧ 50ಕ್ಕೂ ಹೆಚ್ಚು ಸಿಗರೇಟ್ ಕಂಪೆನಿಗಳು ತಕರಾರು ಅರ್ಜಿ ಸಲ್ಲಿಸಿದ್ದವು. ಕಳೆದ ಆರು ತಿಂಗಳ ಹಿಂದೆ ಈ ಎಲ್ಲ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಕೇಂದ್ರ ಸರಕಾರ ರೂಪಿಸಿರುವ ತಿದ್ದುಪಡಿ ನಿಯಮವು ಅಕ್ರಮ ಹಾಗೂ ಕಾನೂನು ಬಾಹಿರವಾಗಿದೆ ಎಂದು ಘೋಷಿಸಿ ಶುಕ್ರವಾರ ಅಂತಿಮ ತೀರ್ಪು ಹೊರಡಿಸಿತು.
ಆದರೆ, ಕೇಂದ್ರ ಸರಕಾರ ಅಥವಾ ಸಕ್ಷಮ ಪ್ರಾಧಿಕಾರವು ಸಂವಿಧಾನದ ಪರಿಚ್ಛೇದ 77(3)ರಡಿ ಕಾನೂನಿನ ಪ್ರಕಾರ ಹೊಸದಾಗಿ ತಿದ್ದುಪಡಿ ಪ್ರಕ್ರಿಯೆ ನಡೆಸಲು ಸ್ವತಂತ್ರವಾಗಿದೆ ಎಂದು ನ್ಯಾಯಪೀಠವು ಇದೇ ವೇಳೆ ಸ್ಪಷ್ಟಪಡಿಸಿದೆ. ಹಾಗೆಯೇ, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳು (ಪ್ಯಾಕೇಟ್ ಮತ್ತು ಲೇಬಲಿಂಗ್) ಅಧಿನಿಯಮಗಳು-2008(ತಿದ್ದುಪಡಿಯಾಗದ) ಪ್ರಶ್ನಿಸಿದ್ದ ಅರ್ಜಿಗಳನ್ನು ನ್ಯಾಯಪೀಠ ಇದೇ ಸಂದರ್ಭದಲ್ಲಿ ವಜಾಗೊಳಿಸಿ ಆದೇಶಿಸಿದೆ.
ಈ ಆದೇಶದಿಂದಾಗಿ ಸಿಗರೇಟ್ ಸೇರಿದಂತೆ ಇತರೆ ತಂಬಾಕು ಉತ್ಪನ್ನಗಳ ಪೊಟ್ಟಣದ ಮೇಲಿನ ಶೇ.85ರಷ್ಟು ಜಾಗದ ಮೇಲೆ ಚಿತ್ರಾತ್ಮಕ ಎಚ್ಚರಿಕೆ ಸಂದೇಶ ಪ್ರಕಟಿಸುವುದು ತಪ್ಪಲಿದೆ. ಬದಲಾಗಿ ತಿದ್ದುಪಡಿ ನಿಯಮ ಜಾರಿಯಾಗುವ ಮುನ್ನ ಜಾರಿಯಲ್ಲಿದ್ದಂತೆ ಸಿಗರೇಟ್ ಪೊಣ್ಣಟದ ಮೇಲೆ ಕೇವಲ 40ರಷ್ಟು ಜಾಗದಲ್ಲಿ ಚಿತ್ರಾತ್ಮಕ ಎಚ್ಚರಿಕೆ ಸಂದೇಶ ಪ್ರಕಟಿಸಬಹುದಾಗಿದೆ.
ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳು (ಪ್ಯಾಕೇಟ್ ಮತ್ತು ಲೇಬಲಿಂಗ್) ಅಧಿನಿಯಮಗಳು-2008ಗಳು ನಿಯಮಬಾಹಿರವಾಗಿದೆ. ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಅಕ್ರಮವಾಗಿ ಹೇಗೆ ಜಾರಿಯಲ್ಲಿದೆ, ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬುದುನ್ನು ಸಾಬೀತುಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ. ಹೀಗಾಗಿ, ಈ ಅಧಿನಿಯಮಗಳು ಕಾನೂನು ಬಾಹಿರವಾಗಿದೆ ಎಂದು ಹೇಳಲು ಕೋರ್ಟ್‌ಗೆ ಮುಂದೆ ಯಾವುದೇ ಸಕಾರಣಗಳು ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಬಳಿಕ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳು (ಪ್ಯಾಕೇಟ್ ಮತ್ತು ಲೇಬಲಿಂಗ್) ಅಧಿನಿಯಮಗಳು-2008(ತಿದ್ದುಪಡಿಯಾಗದ)ಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.
ಹಳೆಯ ಪೊಟ್ಟಣಗಳನ್ನು ಮಾರಾಟ ಮಾಡಲು ಕೇವಲ ಎರಡು ತಿಂಗಳ ಕಾಲಾವಕಾಶ ನೀಡಿದ್ದೂ ಸರಿಯಲ್ಲ. ಹೀಗಾಗಿ, ತಿದ್ದುಪಡಿ ನಿಯಮವು ಅನಿಯಂತ್ರಿತವಾಗಿದೆ. ಹೀಗಾಗಿ, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳು (ಪ್ಯಾಕೇಟ್ ಮತ್ತು ಲೇಬಲಿಂಗ್) ಅಧಿನಿಯಮಗಳು-2014 ಅಕ್ರಮ ಹಾಗೂ ಕಾನೂನು ಬಾಹಿರ ಎಂದು ನ್ಯಾಯಪೀಠ ಆದೇಶದಲ್ಲಿ ಘೋಷಿಸಿದೆ.







