ಕರಾವಳಿಯಲ್ಲಿ ಶಿಕ್ಷಣ,ಆರೋಗ್ಯಕ್ಕೆ ಪ್ರತ್ಯೇಕ ನೀತಿ ಕಲ್ಪಿಸಲು ಅಬ್ದುರ್ರವೂಫ್ ಪುತ್ತಿಗೆ ಮನವಿ

ಮಂಗಳೂರು, ಡಿ.15: ಕರಾವಳಿ ಕರ್ನಾಟಕದ ಕಾರವಾರದಿಂದ ಉಳ್ಳಾಲದವರೆಗೆ ಆರೋಗ್ಯ ಸೇವೆ, ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತ್ಯೇಕ ನೀತಿ ಅಳವಡಿಸಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರವೂಫ್ ಪುತ್ತಿಗೆ ನೇತೃತ್ವದ ನಿಯೋಗವು ದ.ಕ.ಜಿಲ್ಲಾಧಿಕಾರಿಗಳ ಮೂಲಕ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಸಲ್ಲಿಸಿದ್ದಾರೆ.
ಈ ಭಾಗದ ಲಕ್ಷಗಟ್ಟಲೆ ಜನರು ಅರಬ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉದ್ಯಮ ಸೇವಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಪ್ರತಿಭೆ ಮತ್ತು ಸಂಪರ್ಕವನ್ನು ದೇಶಕ್ಕೆ ಬಳಸಿಕೊಂಡು ದೇಶಿ ವಿನಿಮಯ ಹೆಚ್ಚು ಬರುವಂತೆ ಪ್ರಯತ್ನಿಸಬೇಕು. ಇಲ್ಲಿಯ ಆಸ್ಪತ್ರೆಗಳು ದೇಶ-ದೇಶಗಳ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಶಕ್ತವಾಗಿವೆ. ವೈದ್ಯಕೀಯ-ತಾಂತ್ರಿಕ ಮತ್ತಿತರ ಉನ್ನತ ಶಿಕ್ಷಣದಲ್ಲೂ ದೇಶ-ದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಕಲಿಯುತ್ತಿದ್ದಾರೆ. ಇಲ್ಲಿಯ ಸುಂದರ ಪ್ರಾಕೃತಿಕ ಪ್ರವಾಸಿ ಕೇಂದ್ರಗಳು, ಪುರಾತನ ಧಾರ್ಮಿಕ ಕೇಂದ್ರಗಳು, ಇಲ್ಲಿಯ ಕಲೆ-ಸಂಸ್ಕೃತಿಗೆ ದೇಶಿ ಪ್ರವಾಸಿಗರು ಆಕರ್ಷಿತರಾಗಿದ್ದಾರೆ. ಆದ ಕಾರಣ ಉನ್ನತ ಶಿಕ್ಷಣ, ಆರೋಗ್ಯ ಸೇವೆ ಮತ್ತು ಪ್ರವಾಸೋದ್ಯಮದಲ್ಲಿ ಈ ವಲಯವನ್ನು ರಾಷ್ಟ್ರಮಟ್ಟದಲ್ಲಿ ‘ಪ್ರತ್ಯೇಕ ವಲಯ’ ಎಂದು ಘೋಷಿಸಬೇಕು ಮತ್ತು ಪ್ರತ್ಯೇಕ ನೀತಿ ಅಳವಡಿಸಬೇಕು. ಇಲ್ಲಿನ ನಿರುದ್ಯೋಗ ಸಮಸ್ಯೆ ಪರಿಹರಿಸಲು ಹಾಗೂ ದೇಶಕ್ಕೆ ಕೋಟ್ಯಾಂತರ ರೂಪಾಯಿ ವಿದೇಶಿ ವಿನಿಮಯ ತಂದು ಕೊಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಕಾರ್ಪೊರೇಟರ್‌ಗಳಾದ ಅಝೀಝ್ ಕುದ್ರೋಳಿ, ರಮೀಝಾ ನಾಸಿರ್, ಜೆಡಿಎಸ್ ಮುಖಂಡರಾದ ವಸಂತ್ ಪೂಜಾರಿ, ನಾಸಿರ್, ಮುನೀರ್ ಮುಕ್ಕಚೇರಿ, ಹರೀಶ್ ಕೊಟ್ಟಾರಿ, ಜಾಫರ್ ಖಾನ್, ಅದ್ದು ಕೆದು ಅಡ್ಕ, ರತೀಶ್ ಕರ್ಕೇರ ಉಪಸ್ಥಿತರಿದ್ದರು.





