ಅಮೆರಿಕದಲ್ಲಿ ದರೋಡೆ: ಭಾರತ ಮೂಲದ ವ್ಯಕ್ತಿ ಸಾವು

ವಾಶಿಂಗ್ಟನ್, ಡಿ. 15: ಅಮೆರಿಕದ ಓಹಿಯೊದಲ್ಲಿ ಇಬ್ಬರು ದರೋಡೆಕೋರರು ನಡೆಸಿದ ದಾಳಿಯಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
53 ವರ್ಷದ ಕರುಣಾಕರ್ ಕರೇಂಗ್ಲೆ ಕ್ಯಾಮಲಟ್ ಡ್ರೈವ್‌ನಲ್ಲಿನ ಜಿಫಿ ಕನ್ವೀನಿಯನ್ಸ್ ಮಾರ್ಟ್‌ನ ಉದ್ಯೋಗಿ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಅವರು ಅಂಗಡಿಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಪಿಸ್ತೂಲು ಹಿಡಿದ ಇಬ್ಬರು ಒಳಗೆ ನುಗ್ಗಿದರು ಎಂದು ಪೊಲೀಸರು ತಿಳಿಸಿದರು.
ದರೋಡೆಕೋರರು ಕರುಣಾಕರ್ ಮೇಲೆ ಗುಂಡು ಹಾರಿಸಿ ಅಂಗಡಿಯಲ್ಲಿದ್ದ ನಗದು ದೋಚಿ ಪರಾರಿಯಾದರು ಎಂದು ಪೊಲೀಸರು ಹೇಳಿದರು.
ಸ್ಥಳಕ್ಕೆ ಧಾವಿಸಿದ ಫೇರ್‌ಫೀಲ್ಡ್ ಅಗ್ನಿಶಾಮಕ ದಳದ ಸಿಬ್ಬಂದಿ ಕರುಣಾಕರ್‌ರನ್ನು ಯುಸಿ ವೆಸ್ಟ್ ಚೆಸ್ಟರ್ ಆಸ್ಪತ್ರೆಗೆ ದಾಖಲಿಸಿದರು. ಅವರು ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದರು.
ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ. ದರೋಡೆಕೋರರು ಮುಸುಕು ಹಾಕಿಕೊಂಡಿದ್ದರು.
ಭಾರತೀಯರು ಮತ್ತು ಭಾರತ ಮೂಲದ ಅಮೆರಿಕನ್ನರ ನಡುವೆ ಇತ್ತೀಚಿನ ತಿಂಗಳುಗಳಲ್ಲಿ ದಾಳಿಗಳು ಹೆಚ್ಚುತ್ತಿರುವಂತೆಯೇ ಈ ಘಟನೆ ನಡೆದಿದೆ.





