ಮಂಗಳೂರಿನಲ್ಲಿ ರಿಕ್ಷಾ ಬಾಡಿಗೆ ದರ ಅಧಿಕ ವಸೂಲಿ: ಫೋನ್ ಇನ್ ಕಾರ್ಯಕ್ರಮದಲ್ಲಿ ದೂರು
ಮಂಗಳೂರು, ಡಿ.15: ನಗರದ ಕೆಲವು ಕಡೆ ಆಟೊ ರಿಕ್ಷಾ ಚಾಲಕರು ಮೀಟರ್ ದರಕ್ಕಿಂತ ಹೆಚ್ಚು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಬಿಜೈನ ಬಿಗ್ ಬಜಾರ್‌ನಿಂದ ಕೊಟ್ಟಾರಕ್ಕೆ ಹೋಗಲು 20 ರೂ. ಹೆಚ್ಚುವರಿ ದರದ ಬೇಡಿಕೆ ಮಂಡಿಸುತ್ತಾರೆ. ಮೀಟರ್ ದರಕ್ಕೆ ಅನುಗುಣವಾಗಿ ಬಾಡಿಗೆಗೆ ಬರಲು ನಿರಾಕರಿಸುತ್ತಾರೆ ಎಂದು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರು ನೀಡಿದರು.
ಫೋನ್ ಕರೆ ಸ್ವೀಕರಿಸಿ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಯಾವ ಪ್ರಯಾಣಿಕ ಕೂಡಾ ಚಾಲಕರಿಗೆ ಮೀಟರ್ ದರಕ್ಕಿಂತ ಹೆಚ್ಚು ಬಾಡಿಗೆ ಕೊಡಬೇಡಿ. ರಿಕ್ಷಾ ಚಾಲಕರು ಬಾಡಿಗೆಗೆ ಬರಲು ನಿರಾಕರಿಸಿದರೆ ತಕ್ಷಣ 100 ಸಂಖ್ಯೆಗೆ ಕರೆ ಮಾಡಿ ಸಂಬಂಧ ಪಟ್ಟ ಆಟೊ ರಿಕ್ಷಾದ ನಂಬ್ರವನ್ನು ತಿಳಿಸಬೇಕು. ಪೊಲೀಸರು ಕೂಡಲೇ ಸ್ಪಂದಿಸಿ ರಿಕ್ಷಾ ಚಾಲಕರ ಮೇಲೆ ಕ್ರಮ ಜರಗಿಸುತ್ತಾರೆ ಎಂದರು,
ನಂತೂರು ಜಂಕ್ಷನ್‌ನ ಸಮಸ್ಯೆಗಳ ಬಗ್ಗೆ ಬಂದ ಕರೆಗೆ ಸ್ಪಂದಿಸಿದ ಕಮಿಷನರ್ ಟಿ.ಆರ್. ಸುರೇಶ್ ನಂತೂರು ಜಂಕ್ಷನ್ ಸಹಿತ ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿಗೆ ಮನಪಾ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಕ್ರಮ ಹಾಕಿಕೊಂಡಿವೆ. ನಗರದ ಕೆಲವು ಕಡೆ 100 ಮೀಟರ್‌ಗೆ ಒಂದರಂತೆ ಬಸ್ ತಂಗುದಾಣ ಇದ್ದು, ಅನಗತ್ಯ ಎನ್ನಬಹುದಾದ ಬಸ್ ತಂಗುದಾಣಗಳನ್ನು ರದ್ದು ಮಾಡಲಾಗುವುದು ಎಂದರು.
ನಗರದ ಕೆಲವು ಖಾಸಗಿ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರು ಹತ್ತುತ್ತಿರುವಾಗಲೇ ಕಂಡಕ್ಟರ್ ‘ರೈಟ್, ಪೋಯಿ’ ಎನ್ನುತ್ತಾರೆ. ಕೆಲವು ಬಸ್ಸಿನಲ್ಲಿ ಟಿಕೆಟ್ ಕೊಡುವುದಿಲ್ಲ. ಕೇಳಿದರೆ ಮೆಶಿನ್ ಸರಿ ಇಲ್ಲ ಎನ್ನುತ್ತಾರೆ. ಕೆಲವರು ಅವಮಾನಕಾರಿಯಾಗಿ ಮಾತಾಡುತ್ತಾರೆ. ಇನ್ನೂ ಕೆಲವರು ‘ಟಿಕೆಟ್ ಕೊಡುವ ಬಸ್‌ನಲ್ಲೇ ಹೋಗಿ’ ಎನ್ನುತ್ತಾರೆ ಎಂದು ಮಹಿಳೆಯೊಬ್ಬರು ದೂರಿದರು. ಇಂತಹ ಪ್ರಕರಣಗಳ ಬಗ್ಗೆ ನಿರ್ದಿಷ್ಟ ಬಸ್‌ಗಳ ನಂಬರ್ ಸಮೇತ ದೂರು ನೀಡುವಂತೆ ಕಮಿಷನರ್ ಸಲಹೆ ಮಾಡಿದರು. ನಗರದಲ್ಲಿ ಕೆಲವು ವಾಹನಗಳು ಅಧಿಕ ಪ್ರಮಾಣದಲ್ಲಿ ಹೊಗೆ ಉಗುಳುತ್ತಿದ್ದು, ಇದರಿಂದ ವಾಯು ಮಾಲಿನ್ಯ ಉಂಟಾಗಿ ಪರಿಸರಕ್ಕೆ ಹಾನಿಯಾಗುತ್ತಿದೆ. ಈ ಬಗ್ಗೆ ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರೊಬ್ಬರು ಒತ್ತಾಯಿಸಿದರು. ಈ ಬಗ್ಗೆ ಪೊಲೀಸ್, ಆರ್‌ಟಿಒ ಮತ್ತು ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಂದ ಸಂಯುಕ್ತವಾಗಿ ವಾಹನ ತಪಾಸಣಾ ಅಭಿಯಾನವನ್ನು ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಭರವಸೆ ನೀಡಿದರು.
ಬೈಂಕಂಪಾಡಿ ಮತ್ತು ಕುಳಾಯಿಯಲ್ಲಿ ರಾ.ಹೆ. ಕೆಟ್ಟು ಹೋಗಿ ಹಲವು ತಿಂಗಳು ಕಳೆದರೂ ಇನ್ನೂ ದುರಸ್ತಿ ಮಾಡಿಲ್ಲ. ಸಂಚಾರ ಕಷ್ಟವಾಗಿದೆ ಎಂದು ವ್ಯಕ್ತಿಯೊಬ್ಬರು ಅಸಮಾಧಾನ ತೋಡಿಕೊಂಡರು.
ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಸುರೇಶ್ ಕುಮಾರ್, ಮಂಜುನಾಥ್, ಮುಹಮ್ಮದ್ ಶರೀಫ್, ಎಸ್ಸೈ ಸುಕುಮಾರ್, ಎಎಸ್ಸೈ ಶ್ಯಾಮಸುಂದರ್, ಎಚ್‌ಸಿ ಪುರುಷೋತ್ತಮ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಉಪಸ್ಥಿತರಿದ್ದರು.







