ಕೆ.ಸಿ.ರೋಡ್ ಹೆದ್ದಾರಿಯಲ್ಲಿ ದರೋಡೆಗೆ ಯತ್ನ: ಮೂವರು ಆರೋಪಿಗಳ ಬಂಧನ
ಉಳ್ಳಾಲ, ಡಿ. 15: ತಲಪಾಡಿ ಸಮೀಪದ ಕೆ.ಸಿ.ರೋಡ್ ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಮೂವರ ತಂಡವನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರನ್ನು ಕೋಟೆಕಾರು ನಿವಾಸಿ ಯಾಹ್ಯಾ (26), ತಲಪಾಡಿ ನಿವಾಸಿ ಮುಹಮ್ಮದ್ ಫಯಾಝ್ (19), ಕುತ್ತಾರು ನಿವಾಸಿ ಅಬ್ದುಲ್ ತೌಸೀಫ್ (19) ಎಂದು ಗುರುತಿಸಲಾಗಿದೆ.
ಆರೋಪಿಗಳು ಕೆ.ಸಿ.ರೋಡಿನಲ್ಲಿರುವ ರಾ.ಹೆ.66 ರಲ್ಲಿ ರಾತ್ರಿ ಹಾದುಹೋಗುವ ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ತಡೆದು ಅವರ ಸೊತ್ತುಗಳನ್ನು, ಚಿನ್ನಾಭರಣಗಳನ್ನು ದರೋಡೆ ನಡೆಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಕೆ.ಸಿ.ರೋಡಿನಿಂದ ಬಂಧಿಸಿದ್ದಾರೆ. ಆರೋಪಿಗಳ ಕೈಯಲ್ಲಿದ್ದ ಮಾರಕಾಯುಧ, ಮೆಣಸಿನ ಹುಡಿ, ಚೂರಿಗಳನ್ನು ವಶಪಡಿಸಿ, ಪ್ರಕರಣ ದಾಖಲಿಸಿಕೊಂಡು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳ ಪೈಕಿ ಯಾಹ್ಯಾ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ಮತ್ತು ಮಂಗಳೂರು ಉತ್ತರ ಠಾಣೆಯಲ್ಲಿ ಹಲ್ಲೆ, ಜೀವಬೆದರಿಕೆ ದೂರು ದಾಖಲಾಗಿವೆ. ಆರೋಪಿ ಫಯಾಝ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಕೊಲೆಯತ್ನ ಮತ್ತು ಅಕ್ರಮ ಶಸ್ತ್ರಾಸ್ತ್ರ ಉಪಯೋಗ ಮತ್ತು ವಿಟ್ಲ ಠಾಣೆಯಲ್ಲಿ ಕಳವು ಪ್ರಕರಣವಿದೆ. ಆರೋಪಿ ಅಬ್ದುಲ್ ತೌಸೀಫ್ ವಿರುದ್ಧ ಮಂಗಳೂರು ಉತ್ತರ ಠಾಣೆಯಲ್ಲಿ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ ಹಾಗೂ ಉಳ್ಳಾಲ ಠಾಣೆಯಲ್ಲಿ ಗಾಂಜಾ ಸೇವನೆ ಮಾಡಿದ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.







