ಮಾಜಿ ಸಚಿವ ರಾಮದಾಸ್ ಸೇರಿ ಹಲವರು ಪೊಲೀಸ್ ವಶಕ್ಕೆ
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ

ಮೈಸೂರು, ಡಿ.15: ಎಕ್ಸೆಲ್ ಪ್ಲಾಂಟ್‌ಗೆ ಕಸ ಹಾಕಲು ಬಂದಿದ್ದ ಲಾರಿಗಳನ್ನು ತಡೆದ ಆರೋಪದ ಮೇಲೆ ಮಾಜಿ ಸಚಿವ ಎಸ್.ಎ.ರಾಮದಾಸ್ ಸೇರಿದಂತೆ 20 ಮಂದಿಯನ್ನು ವಿದ್ಯಾರಣ್ಯಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಘಟನೆ ಹಿನ್ನೆಲೆ:ನಗರದ ಜೆ.ಪಿ. ನಗರದ ಸುಯೇಜ್ ಫಾರಂನ ಎಕ್ಸೆಲ್ ಪ್ಲಾಂಟ್ ಮುಂಭಾಗ ಮಾಜಿ ಸಚಿವ ಎಸ್.ಎ. ರಾಮದಾಸ್, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ’ಸ್ವಚ್ಛ ಉಸಿರಿಗಾಗಿ ಹೋರಾಟ’ ಎಂಬ ಘೋಷಣೆಯೊಂದಿಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. 15ರಂದು ಬೆಳಗ್ಗೆ ಸುಯೇಜ್ ಫಾರಂನ ಎಕ್ಸೆಲ್ ಪ್ಲಾಂಟ್‌ಗೆ ಕಸ ವಿಲೇವಾರಿ ಮಾಡಲು ಬಂದ ಲಾರಿಗಳನ್ನು ಪ್ರತಿಭಟನಾನಿರತರು ತಡೆಯಲು ಯತ್ನಿಸಿದ್ದರು. ಈ ವೇಳೆ, ಪೊಲೀಸರು ಮತ್ತು ಮಾಜಿ ಸಚಿವ ರಾಮದಾಸ್ ನಡುವೆ ಮಾತಿನ ಚಕಮಕಿ ನಡೆಯಿತು.
ಪರಿಸ್ಥಿತಿ ಹತೋಟಿಗೆ ತರಲು ವಿದ್ಯಾರಣ್ಯಪುರಂ ಪೊಲೀಸರು ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಮಾಜಿ ಸಚಿವ ರಾಮದಾಸ್ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.





