ವಿಶಾಖಪಟ್ಟಣದಲ್ಲಿ ವಿಶೇಷ ಮೈಲುಗಲ್ಲು ತಲುಪುವ ವಿಶ್ವಾಸದಲ್ಲಿ ಎಂ.ಎಸ್.ಧೋನಿ

ವಿಶಾಖಪಟ್ಟಣ, ಡಿ.15:ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ನೆಚ್ಚಿನ ವಿಶಾಖಪಟ್ಟಣ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿಶೇಷ ಮೈಲುಗಲ್ಲು ತಲುಪುವ ವಿಶ್ವಾಸದಲ್ಲಿದ್ದಾರೆ.
ಭಾರತ-ಶ್ರೀಲಂಕಾ ನಡುವೆ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ರವಿವಾರ ಇಲ್ಲಿ ನಡೆಯಲಿದ್ದು, ಧೋನಿಗೆ 10,000 ರನ್ ಪೂರೈಸಿದ ವಿಶ್ವದ ಎರಡನೇ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎನಿಸಿಕೊಳ್ಳಲು ಇನ್ನು 102 ರನ್ ಅಗತ್ಯವಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ ಮಾತ್ರ 10,000ಕ್ಕೂ ಅಧಿಕ ರನ್ ಗಳಿಸಿದ ವಿಕೆಟ್‌ಕೀಪರ್ ಆಗಿದ್ದಾರೆ.
ಧೋನಿ 12 ವರ್ಷಗಳ ಹಿಂದೆ ವಿಶಾಖಪಟ್ಟಣ ಸ್ಟೇಡಿಯಂನಲ್ಲಿ ಪಾಕಿಸ್ತಾನದ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿ ಎಲ್ಲರ ಚಿತ್ತ ತನ್ನತ್ತ ಸೆಳೆದಿದ್ದರು.
ದೇಶೀಯ ಕ್ರಿಕೆಟ್‌ನಲ್ಲಿ ನೀಡಿದ ಉತ್ತಮ ಪ್ರದರ್ಶನ ಆಧಾರದಲ್ಲಿ 2004ರಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಧೋನಿ ಬಾಂಗ್ಲಾದೇಶ ವಿರುದ್ಧ ಆಡಿದ್ದ ಚೊಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಮುಂದಿನ 3 ಪಂದ್ಯಗಳಲ್ಲಿ 12, ಅಜೇಯ 7 ಹಾಗೂ 3 ರನ್ ಗಳಿಸಿದ್ದರು.
ವಿಶಾಖಪಟ್ಟಣದಲ್ಲಿ 2005ರ ಎಪ್ರಿಲ್ 5 ರಂದು ಪಾಕಿಸ್ತಾನ ವಿರುದ್ಧ ಆಡಿರುವ ತನ್ನ 5ನೇ ಏಕದಿನ ಪಂದ್ಯ ಧೋನಿಯ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತ್ತು. ಸಚಿನ್ ತೆಂಡುಲ್ಕರ್ ವಿಕೆಟ್ ಪತನಗೊಂಡ ನಂತರ 3ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬ್ಯಾಟಿಂಗ್‌ಗೆ ಇಳಿದಿದ್ದ ಧೋನಿ ಕೇವಲ 123 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಒಳಗೊಂಡ 148 ರನ್ ಗಳಿಸಿದ್ದರು. 9 ವಿಕೆಟ್‌ಗೆ 356 ರನ್ ಗಳಿಸಿದ್ದ ಭಾರತ ಆ ಪಂದ್ಯವನ್ನು 58 ರನ್‌ಗಳಿಂದ ಗೆದ್ದುಕೊಂಡಿತ್ತು. ಈ ಪಂದ್ಯದ ಮೂಲಕ ಭಾರತದ ಕ್ರಿಕೆಟ್‌ನಲ್ಲಿ ಸೂಪರ್‌ಸ್ಟಾರ್ ಆಟಗಾರನೊಬ್ಬ ಮೂಡಿಬಂದಿದ್ದ.
ಐಸಿಸಿ ಆಯೋಜಿಸುವ ಎಲ್ಲ 3 ಪ್ರಮುಖ ಟೂರ್ನಿಗಳನ್ನು ಜಯಿಸಿರುವ ಏಕೈಕ ನಾಯಕ ಧೋನಿ ಈಗ ಮಾಜಿ ನಾಯಕನಾಗಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಧರ್ಮಶಾಲಾದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ 65 ರನ್ ಗಳಿಸಿ ಟೀಕಾಕಾರರ ಬಾಯಿ ಮುಚ್ಚಿಸಿರುವ ಧೋನಿಗೆ ವಿಶಾಖಪಟ್ಟಣದಲ್ಲಿ 12 ವರ್ಷಗಳ ಹಿಂದಿನ ಮ್ಯಾಜಿಕ್ ಪುನರಾವರ್ತಿಸಲು ಉತ್ತಮ ಅವಕಾಶ ಒದಗಿಬಂದಿದೆ.
ಏಕದಿನದಲ್ಲಿ 10,000 ರನ್ ಪೂರೈಸುವ ಜೊತೆಗೆ ಭಾರತಕ್ಕೆ ಏಕದಿನ ಸರಣಿಯನ್ನು ಗೆದ್ದುಕೊಡುವ ಅವಕಾಶವೂ ಧೋನಿ ಮುಂದಿದೆ. ಈ ಮೂಲಕ 2019ರ ವಿಶ್ವಕಪ್ ತನಕ ಟೀಕಾಕಾರರ ಬಾಯಿ ಮುಚ್ಚಿಸಬಹುದು.







