ಎಡಗೈ ಬಳಸುವ ಮುಂಬೈ ಬಾಲಕಿಗೆ ವಿಶೇಷ ಶಾರ್ಪನರ್‌ಗಳನ್ನು ಕಳುಹಿಸಿ ಹೃದಯಗಳನ್ನು ಗೆದ್ದ ಕಂಪನಿ

ಮುಂಬೈ,ಡಿ.16: ಖ್ಯಾತ ನಟರಾಜ ಮತ್ತು ಅಪ್ಸರಾ ಪೆನ್ಸಿಲ್‌ಗಳನ್ನು ತಯಾರಿಸುವ ಹಿಂದುಸ್ಥಾನ ಪೆನ್ಸಿಲ್ಸ್ ಕಂಪನಿಯು ಎಳೆಯ ಬಾಲಕಿಯೋರ್ವಳಿಗೆ ತುಂಬ ಇಷ್ಟದ ಕಾರ್ಯವೊಂದನ್ನು ಮಾಡಿ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ.
ತಮ್ಮೆಲ್ಲ ಕೆಲಸಗಳಿಗೂ ಎಡಗೈಯನ್ನೇ ಬಳಸುವವರು ಅಥವಾ ಎಡಚರನ್ನು ನಾವು ನೋಡಿದ್ದೇವೆ. ಆದರೆ ಬಲಗೈ ಬಳಸುವವರನ್ನೇ ಗಮನದಲ್ಲಿರಿಸಿಕೊಂಡು ವಿನ್ಯಾಸಗೊಳಿಸಲಾಗಿರುವ ಹಲವಾರು ಕಾರ್ಯಗಳನ್ನು ನಿರ್ವಹಿಸುವಲ್ಲಿ ಎಡಚರು ಅನುಭವಿಸುವ ತೊಂದರೆಗಳು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಪೆನ್ಸಿಲ್‌ಗಳನ್ನು ಚೂಪುಗೊಳಿಸುವಂತಹ ಸರಳ ಕೆಲಸಗಳನ್ನೂ ಮಾಡಿಕೊಳ್ಳಲು ಎಡಚರಿಗೆ ಕಷ್ಟವಾಗುತ್ತದೆ.
ತನ್ನ ಮಗಳು ಪೆನ್ಸಿಲ್ ಚೂಪು ಮಾಡಿಕೊಳ್ಳಲು ಪಡುತ್ತಿದ್ದ ಕಷ್ಟಗಳನ್ನು ನೋಡಿದಾಗಲೇ ತಾಯಿಯೊಬ್ಬಳಿಗೆ ಈ ಸಮಸ್ಯೆ ಅರ್ಥವಾಗಿದ್ದು. ಹಿಂದುಸ್ಥಾನ ಪೆನ್ಸಿಲ್ಸ್ ಎಡಗೈಯಿಂದ ಬರೆಯುವರಿಗಾಗಿ ವಿಶೇಷವಾಗಿ ರೂಪಿಸಿದ ಶಾರ್ಪನರ್‌ಗಳನ್ನು ಸ್ವೀಕರಿಸಿರುವ ಮುಂಬೈನ ಗೃಹಿಣಿ ಶ್ವೇತಾ ಸಿಂಗ್ ಅವರ ಅನುಭವ ಹಲವರ ಮನಸುಗಳನ್ನು ತಟ್ಟಿದೆ ಮತ್ತು ಫೇಸ್‌ಬುಕ್‌ನಲ್ಲಿ ಅವರ ಪೋಸ್ಟ್ ವೈರಲ್ ಆಗಿದೆ.
ತನ್ನ ಪೆನ್ಸಿಲ್‌ನ್ನು ಚೂಪು ಮಾಡಿಕೊಳ್ಳಲು ಸಾಧ್ಯವಾಗದೇ ತನ್ನ ನಾಲ್ಕೂವರೆ ವರ್ಷದ ಮಗಳು ಅಳುತ್ತಿರುವುದನ್ನು ಕಂಡು ಶ್ವೇತಾ ಸಿಂಗ್ ತುಂಬ ವ್ಯಥೆಪಟ್ಟುಕೊಂಡಿದ್ದರು. ಮಗುವಿನ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದ ಆಕೆ ಹಿಂದುಸ್ಥಾನ ಪೆನ್ಸಿಲ್ಸ್‌ಗೆ ಪತ್ರ ಬರೆದು ಸಮಸ್ಯೆಯನ್ನು ತೋಡಿಕೊಂಡಿದ್ದರು,ಅಷ್ಟೇ. ಕಂಪನಿಯಿಂದ ಒಂದು ದೂರವಾಣಿ ಕರೆಯ ಬಳಿಕ ವಾರದ ನಂತರ ಎಡಗೈಯಿಂದ ಬರೆಯುವ ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಿಸಿದ್ದ ಐದು ಶಾರ್ಪನರ್‌ಗಳಿದ್ದ ಪೆಟ್ಟಿಗೆಯೊಂದು ಅವರನ್ನು ತಲುಪಿತ್ತು.
ಎಡಗೈ ಬಳಸುವ ಮಕ್ಕಳಿಗಾಗಿ ಶಾರ್ಪನರ್‌ಗಳನ್ನು ನಾವು ನಿಯಮಿತವಾಗಿ ತಯಾರಿಸುವುದಿಲ್ಲವಾದರೂ ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮೂಲಕ ಅಂತಹ ವಿಶೇಷ ಶಾರ್ಪನರ್‌ಗಳನ್ನು ನಿಮ್ಮ ಮಗುವಿಗಾಗಿ ಕಳುಹಿಸಿದ್ದೇವೆ ಎಂಬ ಒಕ್ಕಣೆ ಪೆಟ್ಟಿಗೆಯಲ್ಲಿದ್ದ ಕಂಪನಿಯ ಪತ್ರದಲ್ಲಿತ್ತು.
‘‘ನನ್ನ ಮಗಳು ತುಂಬ ಮುದ್ದಾಗಿದ್ದಾಳೆ, ಅಷ್ಟೇ ಬುದ್ಧಿವಂತೆಯೂ ಹೌದು. ಬಲಗೈ ಬಳಸುವವರೇ ಹೆಚ್ಚಿರುವ ಈ ಜಗತ್ತಿನಲ್ಲಿ ಪ್ರತಿ ಸಣ್ಣ ಕೆಲಸಕ್ಕೂ ನನ್ನ ಮಗಳು ಒದ್ದಾಡುತ್ತಿರುವುದನ್ನು ನಾನು ನೋಡುತ್ತಿದ್ದೆ.
ನಿಮ್ಮೊಂದಿಗೆ ಪುಟ್ಟ ಘಟನೆಯೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಅದೊಂದು ದಿನ ನನ್ನ ಮಗು ಶಾಲೆಯಿಂದ ಮರಳಿದಾಗ ತುಂಬ ವ್ಯಾಕುಲಗೊಂಡಿತ್ತು. ನಾನು ವಿಚಾರಿಸಿದಾಗ, ಶಾಲೆಯಲ್ಲಿ ಎಲ್ಲ ಮಕ್ಕಳೂ ತಮ್ಮ ಪೆನ್ಸಿಲ್‌ಗಳನ್ನು ಸುಲಭವಾಗಿ ಚೂಪು ಮಾಡಿಕೊಳ್ಳುತ್ತಾರೆ. ಆದರೆ ಅದು ತನಗೆ ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಳು. ಹೌದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಶಾರ್ಪನರ್‌ಗಳೆಲ್ಲ ಬಲಗೈ ಬಳಸುವರಿಗಾಗಿಯೇ ನಿರ್ಮಾಣಗೊಂಡಿವೆ ಮತ್ತು ಅದನ್ನು ಬಳಸುವುದು ನನ್ನ ಮಗುವಿಗೆ ತುಂಬ ಕಷ್ಟವಾಗಿತ್ತು. ಆನ್‌ಲೈನ್‌ನಲ್ಲಿ ಹುಡುಕಾಡಿದಾಗ ಎಡಗೈ ಮಕ್ಕಳಿಗಾಗಿಯೇ ಶಾರ್ಪನರ್‌ಗಳು ಇರುವುದು ಗೊತ್ತಾಗಿತ್ತು. ಆದರೆ ಅವು ತುಂಬ ದುಬಾರಿಯಾಗಿದ್ದವು. ಏನಿಲ್ಲವೆಂದರೂ ಒಂದು ಶಾರ್ಪನರ್‌ಗೆ 700 ರಿಂದ 1,200 ರೂ.ಬೆಲೆಯಿತ್ತು.
ಹೀಗಾಗಿ ನಾನು ನನ್ನ ಸಮಸ್ಯೆಯನ್ನು ತೋಡಿಕೊಂಡು ಹಿಂದುಸ್ಥಾನ ಪೆನ್ಸಿಲ್ಸ್‌ಗೆ ಪತ್ರ ಬರೆದಿದ್ದೆ. ಹಿರಿಯ ಅಧಿಕಾರಿಯೋರ್ವರು ದೂರವಾಣಿ ಕರೆಯನ್ನು ಮಾಡಿ ನೆರವಾಗುವ ಭರವಸೆಯನ್ನು ನೀಡಿದ್ದರು. ಒಂದೇ ವಾರದಲ್ಲಿ ನನ್ನ ಮಗಳಿಗಾಗಿ ವಿಶೇಷ ಶಾರ್ಪನರ್ ಗಳು ನನ್ನ ಮನೆಬಾಗಿಲಿಗೆ ತಲುಪಿದ್ದವು’’ ಎಂದು ಸಿಂಗ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಅವರು ಪೋಸ್ಟ್ ಮಾಡಿದ ಈ ಬರಹ ವೈರಲ್ ಆಗಿದ್ದು, ಒಂದೇ ದಿನದಲ್ಲಿ 4,000ಕ್ಕೂ ಅಧಿಕ ಬಾರಿ ಶೇರ್ ಆಗಿದೆ. 11,000 ಲೈಕ್‌ಗಳನ್ನು ಪಡೆದಿದೆ.
This is a classic example of customer's requirement. Superb brand work! Kudos, Hindustan Pencils. You've won my ❤️#branding #socialmedia #advertising pic.twitter.com/RbgcO7c7G7
— Shreyas Deshmukh (@shreyshtyle) December 15, 2017







