ಮೀಯಪದವು: ಬೌಲಿಂಗ್ ಮಾಡುತ್ತಿದ್ದಾಗ ಕುಸಿದು ಯುವಕ ಮೃತ್ಯು

ಮಂಜೇಶ್ವರ, ಡಿ.16: ಕ್ರಿಕೆಟ್ ಪಂದ್ಯಾಟದಲ್ಲಿ ಬೌಲಿಂಗ್ ಮಾಡುತ್ತಿದ್ದ ವೇಳೆ ಕುಸಿದು ಯುವಕನೋರ್ವ ಮೃತಪಟ್ಟ ಘಟನೆ ಇಲ್ಲಿನ ಮೀಯಪದವು ಬಳಿ ಇಂದು ಪೂರ್ವಾಹ್ನ 11:30ರ ಸುಮಾರಿಗ ನಡೆದಿದೆ.
ಮೃತ ಯುವಕನನ್ನು ಉಪ್ಪಳ ಜೋಡುಕಲ್ಲು ಕಯ್ಯಾರು ನಿವಾಸಿ ನಾರಾಯಣ ಎಂಬವರ ಪುತ್ರ ಪದ್ಮನಾಭ ಎಂದು ಗುರುತಿಸಲಾಗಿದೆ.
ಇಲ್ಲಿನ ಮೀಯಪದವು ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟದ ವೇಳೆ ಈ ದುರಂತ ಸಂಭವಿಸಿದೆ. ಪದ್ಮನಾಭ ದೇರಂಬಲ ತಂಡದಲ್ಲಿ ಆಟಗಾರನಾಗಿ ಆಡುತ್ತಿದ್ದರು. ಬೌಲಿಂಗ್ ಮಾಡುತ್ತಿದ್ದ ಅವರು ಓವರಿನ ಕೊನೆಯ ಎಸೆತವನ್ನು ಎಸೆಯಲು ಬಾಕಿಯಿತ್ತು. ಆ ಎಸೆತದ ವೇಳೆ ಪದ್ಮನಾಭ ಹಠಾತ್ ಕುಸಿದರೆನ್ನಲಾಗಿದೆ. ಕೂಡಲೆ ಜೊತೆ ಆಟಗಾರರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುವಷ್ಟರಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಪದ್ಮನಾಭರ ನಿಧನದಿಂದಾಗಿ ಮೀಯಪದವಿನಲ್ಲಿ ನಡೆಯುತ್ತಿದ್ದ ಪಂದ್ಯಾಟವನ್ನು ರದ್ದುಪಡಿಸಲಾಗಿದೆ. ಹಾಗೂ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಇಂದು ನಡೆಯುವ ಪಂದ್ಯಾಟವನ್ನು ರದ್ದುಗೊಳಿಸಿರುವುದಾಗಿ ಕ್ರಿಕೆಟ್ ಅಸೋಸಿಯೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.





