ತುಮಕೂರು : ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಜಿ.ಪಂ.ಉಪಾಧ್ಯಕ್ಷರ ಸೂಚನೆ

ತುಮಕೂರು,ಡಿ.16:ಜಿಲ್ಲಾ ಪಂಚಾಯತ್ ನ ವಿವಿಧ ಲೆಕ್ಕಶೀರ್ಷಿಕೆಯಡಿ ಲೋಕೋಪಯೋಗಿ ಇಲಾಖೆ,ಪಂಚಾಯತ್ ರಾಜ್ ಇಂಜಿನಿಯರಂಗ್ ಇಲಾಖೆ ಕರ್ನಾಟಕ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮ(ಕೆ.ಆರ್.ಇ.ಡಿ.ಎಲ್)ಹಾಗೂ ನಿರ್ಮಿತಿ ಕೇಂದ್ರಗಳ ತೆಗೆದುಕೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ,ಅಯಾಯ ಇಲಾಖೆಗಳ ಸುಪರ್ದಿಗೆ ನೀಡುವಂತೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹಾಗೂ ಜಿ.ಪಂ.ಉಪಾಧ್ಯಕ್ಷೆ ಶಾರದ ಎನ್.ನರಸಿಂಹಮೂರ್ತಿ ಸೂಚನೆ ನೀಡಿದ್ದಾರೆ.
ನಗರದ ಜಿ.ಪಂ.ಸಭಾಗಣದಲ್ಲಿ ನಡೆದ ಸಾಮಾನ್ಯ ಸ್ಥಾಯಿಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಲೆಕ್ಕ ಶೀರ್ಷಿಕೆ 2022,2010,3054 ಸೇರಿದಂತೆ ಜಿ.ಪಂ.ವ್ಯಾಪ್ತಿಗೆ ಒಳಪಡುವ ಆರೋಗ್ಯ, ಶಿಕ್ಷಣ,ಕೃಷಿ, ತೋಟಗಾರಿಕೆ,ಮೀನುಗಾರಿಕೆ, ಪಶುಸಂಗೋಪನೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಕಚೇರಿ ಕಟ್ಟಡ ದುರಸ್ತಿ, ಶಾಲಾ ಕಟ್ಟಡಗಳ ದುರಸ್ತಿ, ಹೊಸ ಶಾಲಾ ಕೊಠಡಿ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ,ಹೀಗೆ ಅನೇಕ ಕಾಮಗಾರಿಗಳನ್ನು ಕೋಟ್ಯಾಂತರ ವೆಚ್ಚದಲ್ಲಿ ನಾಲ್ಕು ಏಜೆನ್ಸಿಗಳು ನಿರ್ವಹಿಸುತ್ತಿದ್ದು,ನಿಗಧಿತ ಕಾಲಮಿತಿಯೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ,ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸುವಂತೆ ಪಿಡಬ್ಯುಡಿ,ಕೆಆರ್‍ಇಡಿಎಲ್,ನಿರ್ಮಿತಿ ಕೇಂದ್ರ ಹಾಗೂ ಪಿಆರ್‍ಇಡಿ ಅಧಿಕಾರಿಗಳಿಗೆ ಸೂಚಿಸಿದರು.
ಸರಕಾರಿ ಉರ್ದು ಶಾಲೆ,ಹಾಸ್ಟೆಲ್ ಕಟ್ಟಡಗಳ ಬಾಡಿಗೆ ಹೆಚ್ಚಳಕ್ಕೆ ಅನುಮೋಧನೆ: ತುಮಕೂರು ನಗರ ಶಾಂತಿನಗರ, ಟಿಪ್ಪು ನಗರ,ಅಳಶೆಟ್ಟಿಕೆರೆ ಪಾಳ್ಯ,ಪಿಹೆಚ್ ಕಾಲೋನಿಗಳಲ್ಲಿ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿರುವ ಸರಕಾರಿ ಉರ್ದು ಶಾಲೆಗಳಿಗೆ ಬಾಡಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಕಟ್ಟಡಗಳ ಮಾಲೀಕರು ನೊಟೀಷ್ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ಇದರ ಡಿಡಿಪಿಐ ಲೋಕೋಪಯೋಗಿ ಇಲಾಖೆಯ ಶಿಫಾರಸ್ಸಿನೊಂದಿದೆ ಸಮಿತಿಯ ಮುಂದೆ ಸಲ್ಲಿಸಿದ್ದ ಬಾಡಿಗೆ ಹೆಚ್ಚಳ ಪ್ರಸ್ತಾವನೆಗೆ ಅನುಮೋಧನೆಯನ್ನು ಸಭೆ ಸರ್ವಾನುಮತದಿಂದ ನೀಡಿತ್ತು.ಅಲ್ಲದೆ ಶಿರಾನಗರದ ಮಾಧವ ನಗರದಲ್ಲಿ ಓಬಿಸಿ ಇಲಾಖೆಯಿಂದ ನಡೆಯುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಮಾಸಿಕ 66 ಸಾವಿರ ರೂ ಬಾಡಿಗೆ ಸೇರಿದಂತೆ ಒಟ್ಟು 18,63,000 ರೂಗಳ ಬಾಡಿಗೆ ಹೆಚ್ಚಳ ಪ್ರಸ್ತಾವನೆಗೆ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ಒಪ್ಪಿಗೆ ನೀಡಿತ್ತು.
ಜಿ.ಪಂ.ಕಚೇರಿ ಬಳಿ ಸ್ವಾಗತ ಕಮಾನು, ಮಾಹಿತಿ ಫಲಕ ಬದಲಾವಣೆ: ತುಮಕೂರು ನಗರದಲ್ಲಿರುವ ಜಿಲ್ಲಾಪಂಚಾಯತ್ ಕಟ್ಟಡ ಇರುವ ರಸ್ತೆಯ ಬಿ.ಹೆಚ್.ರಸ್ತೆಯ ಬದಿಯಲ್ಲಿ ಸುಮಾರು 5.25 ಲಕ್ಷ ರೂಗಳಲ್ಲಿ ನಿರ್ಮಿತಿ ಕೇಂದ್ರದವತಿಯಿಂದ ಸ್ವಾಗತ ಕಮಾನು ಸಿದ್ದಗೊಂಡಿದೆ. ಅದೇ ರೀತಿ ಹಳೆ ಎನ್.ಹೆಚ್.04ರ ಕೋತಿತೋಪು ರಸ್ತೆಯ ಭಾಗದಲ್ಲಿಯೂ ಸ್ವಾಗತ ಕಮಾನು ನಿರ್ಮಾಣಕ್ಕೆ ಸಭೆ ಒಪ್ಪಿಗೆ ಸೂಚಿಸಿತ್ತು.ಅಲ್ಲದೆ ಜಿ.ಪಂ.ಕಚೇರಿ ಆವರಣದಲ್ಲಿ ಇರುವ ಫಲಕದಲ್ಲಿ ಹಾಕಿರುವ ಮಾಹಿತಿ ಫಲಕ 2008ರಲ್ಲಿ ಹಾಕಿದ್ದು,ಇದುವರೆಗೂ ಬದಲಾಯಿಸಿಲ್ಲ.ಕೂಡಲೇ ಪ್ರಸ್ತುತ ಮಾಹಿತಿಯನ್ನು ಒಳಗೊಂಡ ಮಾಹಿತಿ ಫಲಕವನ್ನು ಅಳವಡಿಸಲು ಸಾಮಾನ್ಯ ಸ್ಥಾಯಿಸಮಿತಿ ಅಧ್ಯಕ್ಷೆ ಶ್ರೀಮತಿ ಶಾರದ ಎನ್.ನರಸಿಂಹಮೂರ್ತಿ ಸ್ಥಾಯಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಉಪಕಾರ್ಯದರ್ಶಿ(ಅಭಿವೃದ್ದಿ) ಅವರಿಗೆ ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿರುವ ರಸ್ತೆ ಅತ್ಯಂತ ಕಿರಿದಾಗಿದ್ದು, ಅದನ್ನು ಒನ್‍ವೇಯಾಗಿ ಪರಿವರ್ತಿಸುವಂತೆ ನಗರಪಾಲಿಕೆಗೆ ಕೋರಿಕೊಂಡಿದ್ದು,ಆದರೆ ನಗರಪಾಲಿಕೆ ಜಿಲ್ಲಾ ಪಂಚಾಯಿತಿ ಕೋರಿಕೆಯನ್ನು ತಿರಸ್ಕರಿಸಿದ ಎಂಬ ಮಾಹಿತಿಯಿದೆ.ಆದರೆ ಇದುವರೆಗೂ ಅಧಿಕೃತ ಸಭಾ ನಿರ್ಣಯ ಜಿ.ಪಂ.ಕೈಸೇರಿಲ್ಲ. ಸದರಿ ರಸ್ತೆ ಅತ್ಯಂತ ಕಿರಿದಾಗಿದ್ದು, ಎರಡು ಬದಿಯ ಸಂಚಾರವಾದರೆ ಕಷ್ಟವಾಗುವುದರಿಂದ ಒನ್‍ವೇ ಮಾಡಲು ಕೋರಲಾಗಿತ್ತು.ಈ ಸಂಬಂಧ ಮುಂದಿನ ಸಭೆಗೆ ಪಾಲಿಕೆಯ ಅಧಿಕಾರಿಗಳನ್ನು ಕರೆಯಿಸಿ ಮಾಹಿತಿ ಪಡೆಯಲಾಗುವುದು.ಅಲ್ಲದೆ ಒನ್ ವೇಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಪಷ್ಟಪಡಿಸಿದರು.
11 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿ: ತುಮಕೂರು ಜಿಲ್ಲೆಯ ತುಮಕೂರು ಮತ್ತು ಮಧುಗಿರಿ ಉಪವಿಭಾಗಗಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ 3054 ಲೆಕ್ಕ ಶೀರ್ಷಿಕೆ ಅಡಿಯ ತುಮಕೂರು ಉಪವಿಭಾಗದ 5 ತಾಲೂಕುಗಳಲ್ಲಿ 341 ಲಕ್ಷದಲ್ಲಿ 230 ಕಾಮಗಾರಿಗಳಿಗೆ ಅನುಮೋಧನೆ ದೊರೆತ್ತಿದ್ದು,ಇದುವರೆಗೂ 256.2 ಲಕ್ಷ ಹಣ ಬಿಡುಗಡೆಯಾಗಿದ್ದು,ಈ ಅನುಧಾನದಲ್ಲಿ ಇತ್ತೀಚಿನ ಸರಕಾರದ ಕಾಯ್ದೆ ಅನ್ವಯ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಶೇ24.10ರಷ್ಟು ಕಾಮಗಾರಿಗಳನ್ನು ಕಾಯ್ದಿರಸಬೇಕಾದ ಕಾರಣ ತಡವಾಗಿದೆ.ಮುಂದಿನ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿಕೊಡುವ ಭರವಸೆಯನ್ನು ಕಾರ್ಯಪಾಲಕ ಇಚಿಜಿನಿಯಿರ್ ತಿಳಿಸಿದರು.
ಅದೇ ರೀತಿ ಮತ್ತು ಮಧುಗಿರಿ ಉಪವಿಭಾಗದ ಐದು ತಾಲೂಕುಗಳಲ್ಲಿ 197 ಕಾಮಗಾರಿಗಳಾಗಿ 700 ಲಕ್ಷ ರೂ ಅನುಮೋಧನೆ ದೊರೆತ್ತಿದ್ದು,292.76 ಲಕ್ಷ ರೂ ಬಿಡುಗಡೆಯಾಗಿದೆ.ಈ ಹಿಂದಿನ ವರ್ಷಗಳ ಮುಂದುವರೆದ ಕಾಮಗಾರಿ ಗನ್ನು ಪೂರ್ಣಗೊಳಿಸಿದ್ದು,ಹೊಸ ಕಾಮಗಾರಿಗಳು ಕರಾರಿನ ಹಂತದಲ್ಲಿದ್ದು,ಜನವರಿ ಅಂತ್ಯಕ್ಕೆ ಮುಗಿಸಿಕೊಡುವ ಭರವಸೆ ಯನ್ನು ಮಧುಗಿರಿ ಉಪವಿಭಾಗದ ಪಿ.ಆರ್.ಇ.ಡಿ. ಇಇ ನೀಡಿದರು.
ಇದೇ ಲೆಕ್ಕಶಿರ್ಷಿಕೆಯ ಜಿ.ಪಂ ಶಾಸನ ಬದ್ದ ಅನುದಾನದಲ್ಲಿ ಸಹ ತುಮಕೂರು ಉಪವಿಭಾಗಕ್ಕೆ 4 ಕೋಟಿ ಮತ್ತು ಮಧುಗಿರಿ ಉಪವಿಭಾಗಕ್ಕೆ 1.69 ಕೋಟಿ ರೂ ಅನುದಾನ ಬಂದಿದ್ದು,ತುಮಕೂರಿಗೆ 100 ಲಕ್ಷ ಮತ್ತು ಮಧುಗಿರಿಗೆ 99.8 ಲಕ್ಷ ರೂ ಸೇರಿ ಒಟ್ಟು 200 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯ ಲೆಕ್ಕಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ,ಪ್ರತಿ ತಾಲೂಕಿಗೆ 5.82 ಲಕ್ಷ ರೂ. ಬಿಡುಗಡೆ: ಪ್ರಸ್ತಕ ಸಾಲಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2210 ಲೆಕ್ಕಶೀರ್ಷಿಕೆ ಅಡಿ 60 ಲಕ್ಷ ರೂ ಅನುದಾನ ಬಂದಿದ್ದು,ಪ್ರತಿ ತಾಲೂಕಿಗೆ 5.82 ಲಕ್ಷ ರೂ ನಂತೆ ಸಮವಾಗಿ ಅನುದಾನ ಹಂಚಿಕೆ ಮಾಡಿದ್ದು,ಪಿಹೆಚ್‍ಸಿಗಳ ದುರಸ್ತಿ, ಎ.ಎನ್.ಎಂ ಕ್ವಾರ್ಟಸ್ ದುರಸ್ತಿ,ದಾಸ್ತಾನು ಕೊಠಡಿ ನಿರ್ಮಾಣ ಹೀಗೆ 49 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಅಲ್ಲದೆ ಇದೇ ಲೆಕ್ಕಶೀರ್ಷಿಕೆ ಅಡಿ ಡಿ.ಹೆಚ್.ಕಚೇರಿ ಎರಡನೇ ಮಹಡಿ ನಿರ್ಮಾಣ ಕಾಮಗಾರಿಗೂ 1.25 ಕೋಟಿ ಬಿಡುಗಡೆಯಾಗಿದೆ ಎಂದು ಡಿ.ಹೆಚ್.ಓ ಮಾಹಿತಿ ನೀಡಿದರು.
ಹೊಸದಾಗಿ 21 ಅಂಗನವಾಡಿ ಕಟ್ಟಡ ನಿರ್ಮಾಣ: ಜಿಲ್ಲೆಯಲ್ಲಿ ಒಟ್ಟು 4090 ಅಂಗನವಾಡಿ ಕೇಂದ್ರಗಳಿದ್ದು, ಇವುಗಳಲ್ಲಿ 2064 ಕೇಂದ್ರಗಳಿಗೆ ಸ್ವಂತ ಕಟ್ಟಡವಿದೆ.693 ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಈ ವರ್ಷ ಹೊಸದಾಗಿ ತಲಾ 7 ಲಕ್ಷ ರೂಗಳಂತೆ 21 ಕೇಂದ್ರಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ ಎಂದು ಸಿಡಿಪಿಓ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸ್ಥಾಯಿ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಾಶ್,ಸದಸ್ಯರಾದ ಯಶೋಧಮ್ಮ, ಶಿವಮ್ಮ, ರಾಜೇಗೌಡ, ಕಲ್ಲೇಶ್, ಸಿದ್ದರಾಮಯ್ಯ ಉಪಸ್ಥಿತರಿದ್ದರು.







