ಗೋರಕ್ಷಣೆ ಈಗ ಫ್ಯಾಷನ್ ಆಗಿದೆ: ಸಚಿವ ಎ.ಮಂಜು

ಬೆಂಗಳೂರು, ಡಿ.16: ದೇಶದಲ್ಲಿ ಗೋರಕ್ಷಣೆ ಎನ್ನುವುದು ಈಗ ಪ್ಯಾಷನ್ ಆಗಿದ್ದು, ಗೋಹತ್ಯೆ ಬಗ್ಗೆ ಮಾತನಾಡುವವರು ಯಾರು ಗೋವುಗಳನ್ನು ಸಾಕಿಲ್ಲ ಎಂದು ಪಶುಸಂಗೋಪನಾ ಸಚಿವ ಎ.ಮಂಜು ತಿಳಿಸಿದ್ದಾರೆ.
ನಗರದ ಗಾಂಧಿ ಕೃಷಿ ವಿಶ್ವವಿದ್ಯಾಲಯದ ಬಾಬುರಾಜೇಂದ್ರ ಪ್ರಸಾದ್ ಸಭಾಂಗಣದಲ್ಲಿ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಕರ್ನಾಟಕ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಗೋ ಹತ್ಯೆ ಮಾಡಬಾರದೆಂದು ದೇಶದ ಕಾನೂನು ಎಲ್ಲಿಯೂ ಹೇಳಿಲ್ಲ. ಆದರೆ ಕೆಲವರು ಗೋರಕ್ಷಣೆ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಅಂತಹವರು ವಯಸ್ಸಾದ ಗೋವುಗಳನ್ನು ದತ್ತು ತೆಗೆದುಕೊಳ್ಳಲಿ ಎಂದು ಸವಾಲೆಸೆದರು.
ದೇಸಿ ಹಸುಗಳ ಹಾಲಿಗೆ ಬಹಳ ಬೇಡಿಕೆ ಇದ್ದು, ಮೇವು ಕೊರತೆಯಿಂದಾಗಿ ದೇಸಿ ರಾಸುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದ ಅವರು, ದೇಸಿ ರಾಸುಗಳ ಸಾಕುವ ರೈತರಿಗೆ, ಪಶು ಇಲಾಖೆ ಅಧಿಕಾರಿಗಳು ಅವುಗಳ ಸಾಕಾಣಿಕೆ, ನಿರ್ವಹಣೆ, ಮೇವು ಉತ್ಪಾದನೆಯ ಬಗ್ಗೆ ಸರಿಯಾದ ಮಾಹಿತಿ ನೀಡಬೇಕಾದ ಅಗತ್ಯವಿದೆ ಎಂದರು.
ಹೈನೋದ್ಯಮಕ್ಕೆ ಒತ್ತು: ಕೃಷಿ ನಂಬಿ ನಷ್ಟಕ್ಕೊಳಗಾದ ರೈತರು ನಮ್ಮಲ್ಲಿದ್ದಾರೆ, ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಆದರೆ ಹೈನುಗಾರಿಕೆ ಅಳವಡಿಸಿಕೊಂಡ ರೈತ ಕುಟುಂಬಗಳು ಆತ್ಮಹತ್ಯೆಗೆ ಈಡಾದ ಸುದ್ದಿ ಇಲ್ಲಿಯವರೆಗೆ ಬಂದಿಲ್ಲ. ಹಾಗಾಗಿ ಹೈನುಗಾರಿಕೆಯನ್ನು ಹೆಚ್ಚು ಮಾಡಬೇಕಾದ ಅಗತ್ಯವಿದೆ. ಈ ವರ್ಷ 77 ಸಾವಿರ ಲೀಟರ್ ಹಾಲು ಉತ್ಪಾದನೆಯಾಗಿದೆ, ಮುಂದಿನ ವರ್ಷಾಂತ್ಯದೊಳಗೆ 1 ಕೋಟಿ ಲೀಟರ್ ಹಾಲು ಉತ್ಪಾದನೆ ಮಾಡುವ ಗುರಿಯೊಂದಿಗೆ ರೈತರಿಗೆ ಅಗತ್ಯ ಮಾಹಿತಿ ನೀಡಬೇಕೆಂದರು.
ಇದೇ ಸಂದರ್ಭದಲ್ಲಿ ಐಎಎಸ್, ಐಪಿಎಸ್ ಹುದ್ದೆಗಳಿಗೆ ಆಯ್ಕೆಯಾಗಿರುವ ಪಶುವೈದ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತ ಎಸ್.ರಾಜಕುಮಾರ, ಕರ್ನಾಟಕ ಕುರಿ ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಕೃಷ್ಣ ಸೇರಿದಂತೆ ಇನ್ನಿತರರಿದ್ದರು.
ಪಶು ಆ್ಯಂಬುಲೆನ್ಸ್
ಪಶು ವೈದ್ಯರು ಸರಿಯಾದ ಸಮಯಕ್ಕೆ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಪಶುಗಳಿಗೆ ತುರ್ತು ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ತಾಲೂಕು ಕೇಂದ್ರಗಳಲ್ಲಿ ಪಶು ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗುವುದು. ಇನ್ನು ವೈದ್ಯರಿಗೆ ಸ್ಮಾರ್ಟ್ ಫೋನ್‌ಗಳನ್ನು ವಿತರಿಸಿ, ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗುವುದು.
-ಎ.ಮಂಜು, ಪಶುಸಂಗೋಪನಾ ಸಚಿವ







