ಕೊಣಾಜೆ: ಅಂತರ್ ರಾಜ್ಯ ಕಳ್ಳತನ ಪ್ರಕರಣದ ಆರೋಪಿ ಸೆರೆ

ಕೊಣಾಜೆ, ಡಿ. 16: ಕೇರಳ ರಾಜ್ಯ ಸೇರಿದಂತೆ ಜಿಲ್ಲೆಯ ಹಲೆವೆಡೆ ಕಳ್ಳತನ ನಡೆಸಿ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ ಯೊಬ್ಬನನ್ನು ಕೊಣಾಜೆ ಪೊಲೀಸರು ಶನಿವಾರ ಮುಡಿಪುವಿನಲ್ಲಿ ಬಂಧಿಸಿದ್ದಾರೆ.
ವರ್ಕಾಡಿ ಪಾವೂರಿನ ಗೇರುಕಟ್ಟೆಯ ಅಬ್ದುಲ್ ಸಲೀಂ (40) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಬಳಿ ಪೊಲೀಸರು ಬೈಕ್‌ಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸುತ್ತಿದ್ದಾಗ ಈತ ನಂಬರ್ ಪ್ಲೇಟ್ ಬದಲಾಯಿಸಿ ಓಡಾಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಈತನನ್ನು ವಿಚಾರಿಸಿದಾಗ ಈ ಬೈಕನ್ನು ಪುತ್ತೂರಿನಲ್ಲಿ ಕಳವು ಮಾಡಿ ಬಳಿಕ ನಂಬರ್ ಬದಲಾಯಿಸಿ ಓಡಾಡುತ್ತಿದ್ದು, ಪೊಲೀಸರು ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈತನ ಈ ಹಿಂದೆ ಕಾಸರಗೋಡು, ಮಂಜೇಶ್ವರ, ಬೇಕಲ, ಬದಿಯಡ್ಕ ಮುಂತಾದ ಕಡೆಗಳಲ್ಲಿ ಸುಲಿಗೆ, ಕಳ್ಳತನ ನಡೆಸಿ ಬಂಧಿತನಾಗಿದ್ದು, ಅಲ್ಲದೆ ಇನ್ನೊಂದು ಪ್ರಕರಣದಲ್ಲಿ ವಾರೆಂಟ್ ಆಗಿ ತಲೆಮರೆಸಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಕೇರಳ ಮಾತ್ರವಲ್ಲದೆ ಕೊಣಾಜೆ, ಪುತ್ತೂರು, ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ನಡೆಸಿ ತಲೆಮರೆಸಿಕೊಂಡಿದ್ದ. ಆರೋಪಿ ಕಿನ್ಯಾ ಉಕ್ಕುಡ ಬಳಿ ರಸ್ತೆ ಬದಿಯಲ್ಲಿದ್ದ ಕಾರೊಂದನ್ನು ಕಳ್ಳತನ ನಡೆಸಿದ್ದ, ಜೊತೆಗೆ ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿ ಅಡಿಕೆ ಕಳ್ಳತನ, ಮಂಚಿಯಲ್ಲಿ ಅಡಿಕೆ ಕಳ್ಳತನ, ಪುತ್ತೂರಿನಲ್ಲಿ ಎರಡು ಬೈಕ್ ಕಳ್ಳತನ, ಮಂಜೇಶ್ವರ ಪಾತೂರು ಬಳಿ ಮಗುವಿನ ಕಾಲು ಚೈನ್ ಸುಲಿಗೆ, ಪಾತೂರಿನಲ್ಲಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ಗ ಮಗುವಿನ ಕೊರಳಿನಿಂದ ಚಿನ್ನದ ಸರ ಅಪಹರಿಸಿದ್ದ. ಹೀಗೆ ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಸಲೀಂನನ್ನು ಪೊಲೀಸರು ಬಂಧಿಸಿ ಕಳವು ಮಾಡಿದ ಸುಮಾರು ಮೂರು ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಸುರೇಶ್ ಐಪಿಎಸ್, ಡಿಸಿಪಿ ಹನುಮಂತರಾಯ, ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ದಕ್ಷಿಣ ಉಪವಿಭಾಗದ ರಾಮ ರಾವ್ ಅವರ ಮಾರ್ಗದರ್ಶನದಂತೆ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಅಶೋಕ್, ಪಿಎಸ್‌ಐ ವೆಂಕಟೇಶ್ ಹಾಗೂ ಸಿಬ್ಬಂದಿ ಅಶೋಕ್, ಜಗನ್ನಾಥ, ನಾಗರಾಜ್, ವಿಜಯ್ ಪರಶುರಾಮ, ರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







