ನಾನಲ್ಲ, ನನ್ನ ತಾಯಿ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಾರೆ: ಪ್ರಿಯಾಂಕ ಗಾಂಧಿ

ಹೊಸದಿಲ್ಲಿ, ಡಿ.16: 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆಯೆಳಿದಿರುವ ಪ್ರಿಯಾಂಕ ಗಾಂಧಿ ರಾಯ್‌ಬರೇಲಿಯಿಂದ ನಾನು ಸ್ಪರ್ಧಿಸುತ್ತಿಲ್ಲ 2019ರಲ್ಲೂ ನನ್ನ ತಾಯಿಯೇ ಅಲ್ಲಿಂದ ಸ್ಪರ್ಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ರಾಯ್‌ಬರೇಲಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದು ಶನಿವಾರದಂದು ಪಕ್ಷದ ಜವಾಬ್ದಾರಿಯನ್ನು ಮಗ ರಾಹುಲ್ ಗಾಂಧಿ ಹೆಗಲಿಗೆ ಹಾಕಿದರು. ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಕೆ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ವಾದ್ರಾ ಸ್ಪರ್ಧಿಸುತ್ತಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು.
ಈ ಸುದ್ದಿಯನ್ನು ತಳ್ಳಿಹಾಕಿರುವ ಕಾಂಗ್ರೆಸ್ ಸೋನಿಯಾ ಗಾಂಧಿ ಕೇವಲ ಪಕ್ಷದ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದುತ್ತಿದ್ದಾರೆ, ರಾಜಕೀಯದಲ್ಲಿ ಅವರು ಮುಂದೆಯೂ ಸಕ್ರಿಯವಾಗಿರಲಿದ್ದಾರೆ ಎಂದು ತಿಳಿಸಿದೆ. ಪ್ರಸ್ತುತ ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ (ಅಮೆಥಿ) ಮಾತ್ರ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ತನ್ನ ತಾಯಿಯನ್ನು ಅತ್ಯಂತ ಧೀರ ಮಹಿಳೆ ಎಂದು ಬಣ್ಣಿಸಿರುವ ಪ್ರಿಯಾಂಕಾ ಆಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ 19 ವರ್ಷಗಳಲ್ಲಿ ಅನೇಕ ಸಂಕಷ್ಟ ಸವಾಲುಗಳನ್ನು ಎದುರಿಸಿದ್ದರು. ಆದರೆ ಯಾವುದಕ್ಕೂ ಅಂಜದೆ ಪಕ್ಷಕ್ಕೆ ಆಧಾರವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ.







