ಚಿಕಿತ್ಸೆ ನಿರಾಕರಿಸಿದ ವೈದ್ಯರು: ಚರಂಡಿಯಲ್ಲಿ ಶಿಶುವಿಗೆ ಜನ್ಮ ನೀಡಿದ ಮಹಿಳೆ

ಕೊರಾಪುಟ್, ಡಿ. 16: ಶಾಹಿದ್ ಲಕ್ಷ್ಮಣ್ ನಾಯಕ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಎಂಸಿಎಚ್) ವೈದ್ಯರು ಚಿಕಿತ್ಸೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯೋರ್ವರು ಆಸ್ಪತ್ರೆಯ ಆವರಣದಲ್ಲಿರುವ ಚರಂಡಿಯಲ್ಲಿ ಶಿಶುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಮಹಿಳೆಯನ್ನು ಮಾಸ್ತಿಪುಟ್ ಪಂಚಾಯತ್‌ನ ತಲ್ಜಾನಿಗುಡಾ ಗ್ರಾಮದ ಧಾನೈ ಮುಡುಲಿ ಎಂದು ಗುರುತಿಸಲಾಗಿದೆ. ಅಗತ್ಯದ ವೈದ್ಯಕೀಯ ವರದಿಗಳು ಇಲ್ಲದ ಹಿನ್ನೆಲೆಯಲ್ಲಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದರು ಎಂದು ಧಾನೈ ಸಂಬಂಧಿಕರು ಆರೋಪಿಸಿದ್ದಾರೆ.
ಮಹಿಳೆಯ ಪತಿ ರಘು ಮುಡುಲಿ ಜ್ವರದಿಂದ ಬಳಲುತ್ತಿದ್ದು, ಅವರನ್ನು ಬುಧವಾರ ಎಂಸಿಎಚ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮರುದಿನ ಧಾನೈ ತನ್ನ ಪತಿ ನೋಡಿಕೊಳ್ಳಲು ಆಗಮಿಸಿದ್ದರು. ಈ ಸಂದರ್ಭ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅವರು ಹೊರ ರೋಗಿ ವಿಭಾಗದ ವೈದ್ಯರನ್ನು ಸಂಪರ್ಕಿಸಿದರು. ಆದರೆ, ವೈದ್ಯರು ವೈದ್ಯಕೀಯ ವರದಿಯೊಂದಿಗೆ ಬರುವಂತೆ ತಿಳಿಸಿದರು.
ಬೇರೆ ದಾರಿ ಕಾಣದೆ ಧಾನೈ ಆಸ್ಪತ್ರೆಯ ಆವರಣದಲ್ಲಿರುವ ಟೀ ಅಂಗಡಿಯ ಹಿಂಬದಿಯಲ್ಲಿ ಬಳಸದೇ ಇರುವ ಚರಂಡಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗಂಟೆಗಳ ಅನಂತರ ಸ್ಥಳೀಯರು ಅವರನ್ನು ಅದೇ ಆಸ್ಪತ್ರೆಗೆ ದಾಖಲಿಸಿದರು.







