ಜ.3: ಪಲಿಮಾರು ಶ್ರೀಗಳಿಂದ ಪುರಪ್ರವೇಶ
ಉಡುಪಿ, ಡಿ.16: ಮುಂದಿನ ಜ.18ರಂದು ಎರಡನೇ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನೇರಲಿರುವ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀ, ಪರ್ಯಾಯ ಪೂರ್ವ ಧಾರ್ಮಿಕ ಪ್ರವಾಸವನ್ನು ತೀರ್ಥಕ್ಷೇತ್ರ ಸಂದರ್ಶನವನ್ನು ಮುಗಿಸಿ ಜ.3ರಂದು ಉಡುಪಿ ಪುರಪ್ರವೇಶ ಮಾಡಲಿದ್ದು, ಅವರನ್ನು ಅದ್ದೂರಿ ಸಾಂಪ್ರದಾಯಿಕ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದು ಎಂದು ಪರ್ಯಾಯ ಮೆರವಣಿಗೆ ಸಮಿತಿಯ ಅಧ್ಯಕ್ಷ ಡಾ.ಮೋಹನ್ ಆಳ್ವ ತಿಳಿಸಿದ್ದಾರೆ.
ಪಲಿಮಾರು ಸ್ವಾಮೀಜಿಯವರು ಅಪರಾಹ್ನ 3:30ಕ್ಕೆ ಉಡುಪಿಗೆ ಆಗಮಿಸಲಿ ದ್ದಾರೆ. ಅವರನ್ನು ಜೋಡುಕಟ್ಟೆ ಬಳಿ ಸ್ವಾಗತಿಸಿ, ಸಂಜೆ 4:00ಗಂಟೆಗೆ ಸಾಂಪ್ರದಾಯಿಕ ಮೆರವಣಿಗೆ ಮೂಲಕ ಕರೆತರಲಾಗುವುದು. ಮೆರವಣಿಗೆಯಲ್ಲಿ 75 ಸಾಂಸ್ಕೃತಿಕ ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದು ಮೆರವಣಿಗೆ ಸಮಿತಿಯ ಸಭೆಯ ಬಳಿಕ ಇಂದು ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಗಳನ್ನು ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಸಭಾ ಅಧ್ಯಕ್ಷರ ಉಪಸ್ಥಿತಿಯಲ್ಲಿ ಸ್ವಾಮೀಜಿ ಅವರನ್ನು ವಿಶೇಷ ರಥದಲ್ಲಿ, ಮುಂಬದಿಯಲ್ಲಿ ಪಲಿಮಾರು ಮಠದ ಪಟ್ಟದ ದೇವರನ್ನು ಚಿನ್ನದ ಪಲ್ಲಕಿಯಲ್ಲಿರಿಸಿ ಮೆರವಣಿಗೆಯಲ್ಲಿ ಕರೆತರಲಾ ಗುವುದು. ಮೆರವಣಿಗೆಯು ಕೋರ್ಟ್ ರೋಡ್, ಡಯಾನ ಸರ್ಕಲ್, ಕೆ.ಎಂ. ಮಾರ್ಗ, ತ್ರಿವೇಣಿ ಸರ್ಕಲ್, ಕನಕದಾಸ ರಸ್ತೆ ಮೂಲಕ ರಥಬೀದಿಯನ್ನು ಪ್ರವೇಶಿಸಲಿದೆ.
ರಥಬೀದಿಯಲ್ಲಿ ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಮಾಡುವ ಪಲಿಮಾರು ಶ್ರೀಗಳು, ಅನಂತೇಶ್ವರ, ಚಂದ್ರವೌಳೀಶ್ವರನ ದರ್ಶನ ಮಾಡಿ ಸಂಜೆ 6:35ಕ್ಕೆ ಸರಿಯಾಗಿ ಪಲಿಮಾರು ಮಠವನ್ನು ಪ್ರವೇಶಿಸುವರು ಎಂದು ಡಾ.ಮೋಹನ ಆಳ್ವ ವಿವರಿಸಿದರು.
ಸಂಜೆ 7 ಗಂಟೆಗೆ ಸರಿಯಾಗಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ರಥಬೀದಿಯ ಶ್ರೀಪರವಿದ್ಯಾ ಮಂಟಪ ವೇದಿಕೆಯಲ್ಲಿ ಪಲಿಮಾರು ಶ್ರೀಗಳಿಗೆ ಪೌರಸನ್ಮಾನ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಬದರಿನಾಥದ ಈಶ್ವರ ಪ್ರಸಾದ ನಂಬೂದರಿ ಉಪಸ್ಥಿತರಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಕೆ.ರಘುಪತಿ ಭಟ್, ಭುವನೇಂದ್ರ ಕಿದಿಯೂರು, ಪ್ರೊ.ಎಂ.ಎಲ್.ಸಾಮಗ, ಮನೋಹರ ಶೆಟ್ಟಿ, ದಿವಾಕರ ಶೆಟ್ಟಿ, ರತ್ನಕುಮಾರ್, ಬಾಲಾಜಿ ರಾಘವೇಂದ್ರ ಆಚಾರ್ಯ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಲಕ್ಷ್ಮಿನಾರಾಯಣ ರಾವ್ ಮುಂತಾದವರು ಉಪಸ್ಥಿತ ರಿದ್ದರು.







