ಹನೂರು: ಕುಮಾರಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ಸಿಹಿ ಹಂಚಿ ಸಂಭ್ರಮಾಚರಣೆ
.jpg)
ಹನೂರು,ಡಿ.16: 20 ತಿಂಗಳ ಆಡಳಿತಾವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಮಾದರಿ ಆಡಳಿತ ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದೇವರು ಆಯಸ್ಸು ಆರೋಗ್ಯ ನೀಡಿ ಮುಂದಿನ ದಿನಗಳಲ್ಲಿ ಜನಪರ ಆಡಳಿತ ನೀಡುವಂತಾಗಲಿ ಎಂದು ಜಾತ್ಯಾತೀತ ಜನತಾದಳ ರಾಜ್ಯ ಪ್ರದಾನ ಕಾರ್ಯದರ್ಶಿ ಶಿವಮಲ್ಲೇಗೌಡ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುಟ್ಟುಹಬ್ಬದ ಹಿನ್ನೆಲೆ ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮಲ್ಲೇಗೌಡ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅಧಿಕಾರಾವಧಿ ರಾಜ್ಯದಲ್ಲಿ ಸುವರ್ಣಯುಗವಾಗಿತ್ತು. ರಾಜ್ಯದ ರೈತರ ಸಾಲಮನ್ನಾ ಮಾಡಿ ರೈತಪರ ಸರ್ಕಾರ ನೀಡಿದ್ದರು. ಲಾಟರಿ ಮತ್ತು ಸಾರಾಯಿ ನಿಷೇಧ ಮಾಡುವ ಮೂಲಕ ಸಾಮಾಜಿಕ ಕಳಕಳಿಯುಳ್ಳ ನಿರ್ಧಾರ ಕೈಗೊಂಡಿದ್ದರು. ಒಟ್ಟಾರೆ ಆ 20 ತಿಂಗಳು ಇಡೀ ದೇಶದಲ್ಲಿಯೇ ಮಾದರಿ ಆಡಳಿತ ನೀಡಿ ಅಲ್ಪಾವಧಿಯಲ್ಲಿ ಹೆಚ್ಚು ಜನಮನ್ನಣೆಗಳಿಸಿದ್ದರು ಎಂದು ತಿಳಿಸಿದರು.
ನಾನು ಕೂಡ ಟಿಕೆಟ್ ಆಕಾಂಕ್ಷಿ: ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗರಿಗೆ ಕಾಂಗ್ರೆಸ್ ಪಕ್ಷ ಹೊರತುಪಡಿಸಿ ಇನ್ಯಾವ ಪಕ್ಷದಿಂದಲೂ ಅವಕಾಶವಿಲ್ಲ ಎಂಬ ಮಾತಿದೆ. ಆದರೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ನಾನು ಕೂಡ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದು ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗಿದೆ. ಕ್ಷೇತ್ರದಿಂದ ನಾನಲ್ಲದೆ ಇನ್ನೂ ಅನೇಕ ಜನ ಅರ್ಜಿ ಸಲ್ಲಿಸಿದ್ದು ವರಿಷ್ಠರು ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ತಾವು ಬದ್ಧರಾಗಿರುವುದಾಗಿ ಸ್ವಷ್ಟಪಡಿಸಿದರು.
ಮುಖಂಡರಾದ ದಾಸನಹುಂಡಿ ಬಾಬು ಮಾತನಾಡಿ ಕುಮಾರಣ್ಣನವರು ಗ್ರಾಮ ವಾಸ್ತವ್ಯ ಮಾಡುವ ಮೂಲಕ ಸರ್ಕಾರವನ್ನೇ ಬಡಜನರ ಮನೆ ಬಾಗಿಲಿಗೆ ತಂದ ಮೊಟ್ಟಮೊದಲ ಮುಖ್ಯಮಂತ್ರಿಯಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ಜನತಾ ದರ್ಶನದ ಮೂಲಕ ಜನಸಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದರು. 2018ರಲ್ಲಿ ಬರುವ ವಿಧಾನಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ರೈತರು ಮತ್ತು ರಾಜ್ಯವನ್ನು ಅಭಿವೃದ್ಧಿಯನ್ನು ಕೊಂಡೊಯ್ಯುವಂತಾಗಲಿ ಎಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಗುಂಬಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಸುರೇಖಾ, ಮುಖಂಡರಾದ ಪುಟ್ಟಸ್ವಾಮಿಗೌಡ, ಸಿದ್ದೇಗೌಡ, ಮರಿಗೌಡ, ಶಿವರಾಮೇಗೌಡ, ನಾಗಣ್ಣ, ನಾಗರಾಜು, ಉಮೇಶ್, ನಟರಾಜು, ವರ್ಕ್‍ಷಾಪ್ ಬಾಬು, ಜಯಮ್ಮ, ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಲೋಕೇಶ್, ಯುವ ಮುಖಂಡರಾದ ಸತೀಶ್. ಲೋಕೇಶ್ ಇನ್ನಿತರರು ಹಾಜರಿದ್ದರು.







