ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಇನ್ನು ಅಮೆರಿಕದಲ್ಲಿ ಕೆಲಸವಿಲ್ಲ: ಟ್ರಂಪ್ ಆಡಳಿತ ನಿರ್ಧಾರ
ಭಾರತೀಯರ ಮೇಲೆ ಹೆಚ್ಚಿನ ಪರಿಣಾಮ

ವಾಶಿಂಗ್ಟನ್, ಡಿ. 16: ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳು ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡುವ ಒಬಾಮ ಆಡಳಿತದ ಕಾನೂನನ್ನು ಹಿಂದಕ್ಕೆ ಪಡೆಯಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದೆ.ಈ ನಿರ್ಧಾರವು ಸಾವಿರಾರು ಭಾರತ ರಾಷ್ಟ್ರೀಯರು ಮತ್ತು ಅವರ ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ.
2015ರ ಬಳಿಕ, ಎಚ್-1ಬಿ ವೀಸಾಗಳನ್ನು ಹೊಂದಿರುವವರ ಸಂಗಾತಿಗಳಿಗೆ ಎಚ್-4 ಆಶ್ರಿತ ವೀಸಾಗಳ ಅಡಿಯಲ್ಲಿ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು.ಅಮೆರಿಕ ಪ್ರತೀ ವರ್ಷ ನೀಡುತ್ತಿರುವ 85,000 ಎಚ್-1ಬಿ ವೀಸಾಗಳ ಪೈಕಿ ಸುಮಾರು 70 ಶೇಕಡದಷ್ಟನ್ನು ಭಾರತೀಯರು ಪಡೆಯುತ್ತಿದ್ದಾರೆ.ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಪ್ರಿಲ್‌ನಲ್ಲಿ ಹೊರಡಿಸಿದ ‘ಅಮೆರಿಕನ್ನರಿಂದ ಖರೀದಿಸಿ ಮತ್ತು ಅಮೆರಿಕನ್ನರನ್ನು ಕೆಲಸಕ್ಕೆ ಸೇರಿಸಿ’ ಆದೇಶಕ್ಕೆ ಅನುಗುಣವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಂತರಿಕ ಭದ್ರತೆ ಇಲಾಖೆ ಹೇಳಿದೆ.ನೂತನ ನಿಯಮವನ್ನು 2018ರಲ್ಲಿ ಜಾರಿಗೆ ತರಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಇದಕ್ಕೆ ಹೊರತಾಗಿ, ಎಚ್-1ಬಿ ವೀಸಾ ಯೋಜನೆಯಲ್ಲೇ ಮಾರ್ಪಾಡುಗಳನ್ನು ಮಾಡುವ ಪ್ರಸ್ತಾಪವನ್ನೂ ಆಂತರಿಕ ಭದ್ರತಾ ಇಲಾಖೆ ಮುಂದಿಟ್ಟಿದೆ. ‘‘ಅತ್ಯುತ್ತಮ ಹಾಗೂ ಅತ್ಯಂತ ಬುದ್ಧಿವಂತ ವಿದೇಶೀಯರನ್ನು ಮಾತ್ರ ಈ ಯೋಜನೆಯಡಿ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ಇಲಾಖೆ ತಿಳಿಸಿದೆ.





