2020ರ ವೇಳೆಗೆ ರೈತರ ಆದಾಯ ಇಮ್ಮಡಿ: ಜೇಟ್ಲಿ

ಹೊಸದಿಲ್ಲಿ, ಡಿ.16: ಕೃಷಿಯನ್ನು ಸುಸ್ಥಿರ ಉದ್ಯೋಗವನ್ನಾಗಿಸಲು ಸರಕಾರವು 2020ರ ವೇಳೆಗೆ ರೈತರ ಆದಾಯವನ್ನು ಇಮ್ಮಡಿಗೊಳಿಸುವ ಮಹಾತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನರು ಕೃಷಿಯನ್ನೇ ಜೀವನೋಪಾಯವಾಗಿಸಿಕೊಂಡಿದ್ದಾರೆ ಎಂಬುದನ್ನು ಬೊಟ್ಟು ಮಾಡಿದ ಜೇಟ್ಲಿ ರೈತರ ಖರೀದಿಯ ಶಕ್ತಿಯನ್ನು ಹೆಚ್ಚಿಸುವುದು ಬಹಳ ಅಗತ್ಯವಾಗಿದೆ. ಯಾಕೆಂದರೆ ದೇಶದ ಆರ್ಥಿಕ ಬೆಳವಣಿಗೆಯು ಈ ವರ್ಗದ ಜನರ ಸಾಮರ್ಥ್ಯ ಮತ್ತು ಶಕ್ತಿಯ ಮೇಲೆ ಅವಲಂಬಿತವಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಜಗತ್ತಿನಾದ್ಯಂತ ರೈತ ಸಮುದಾಯವು ಅಪಾಯದಲ್ಲಿದೆ ಎಂದು ತಿಳಿಸಿದೆ ಜೇಟ್ಲಿ ವಿವಿಧ ದೇಶಗಳು ತಮ್ಮ ರೈತರ ಬೆಂಬಲಕ್ಕಾಗಿ ವಿವಿಧ ರೀತಿಯ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ ಎಂದು ತಿಳಿಸಿದರು. ಕೆಲವು ಅತಿಹೆಚ್ಚು ಅಭಿವೃದ್ಧಿ ಹೊಂದಿರುವ ದೇಶಗಳು ವಿವಿಧ ಸಬ್ಸಿಡಿಗಳ ಮೂಲಕ ಹಣವು ನೇರವಾಗಿ ರೈತರ ಜೇಬಿಗೆ ಹೋಗುವಂತೆ ಮಾಡಿದರೆ ಅಂತಹ ಸಾಮರ್ಥ್ಯವಿಲ್ಲದ ದೇಶಗಳು ರೈತರ ಸಮಸ್ಯೆಗಳನ್ನು ಪರಿಹರಿಸುವ ಸವಾಲನ್ನು ಎದುರಿಸಲು ಪರದಾಡಬೇಕಾಗುತ್ತದೆ ಎಂದು ವಿತ್ತ ಸಚಿವರು ತಿಳಿಸಿದರು. ಭಾರತದಲ್ಲಿ ನಾವು ತಕ್ಕಮಟ್ಟಿನ ಮಹಾತ್ವಾಕಾಂಕ್ಷಿ ಯೋಜನೆಯನ್ನು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ರೂಪಿಸಿದ್ದು ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಸವಾಲನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಜೇಟ್ಲಿ ತಿಳಿಸಿದರು. ಗ್ರಾಮೀಣ ಭಾಗಗಳಲ್ಲಿ ರಸ್ತೆಗಳ ನಿರ್ಮಾಣ, ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ನೀರಾವರಿಯ ಅಭಿವೃದ್ಧಿ ಮತ್ತು ಮನೆಗಳ ನಿರ್ಮಾಣ ಇವು ಮೊದಲ ಹಂತದಲ್ಲಿ ಸೇರಿವೆ ಎಂದು ಸಚಿವರು ತಿಳಿಸಿದರು. ಸಾಲದ ಲಭ್ಯತೆ, ಕಡಿಮೆ ಬಡ್ಡಿದರ ಮತ್ತು ಬೆಳೆವಿಮೆಗಳು ಈ ನಿಟ್ಟಿನಲ್ಲಿರುವ ಇತರ ಕೆಲವು ಹೆಜ್ಜೆಗಳು ಎಂದು ಜೇಟ್ಲಿ ವಿವರಿಸಿದರು.
ಕೃಷಿ ಬಳಕೆಯ ವಸ್ತುಗಳ ದರಗಳ ನಿರಂತರ ಏರಿಕೆಯ ಸವಾಲನ್ನೂ ರೈತರು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ ಜೇಟ್ಲಿ ಆಹಾರವು ಎಲ್ಲರಿಗೂ ಕೈಗೆಟಕುವ ದರದಲ್ಲಿ ಸಿಗುವಂತೆ ನೋಡುವುದು ಎಲ್ಲಾ ಸಮಾಜದ ಬಹುಮುಖ್ಯ ಕರ್ತವ್ಯ ಆದರೆ ಇದೇ ವೇಳೆ ರೈತರು ಕೂಡಾ ತಮ್ಮ ಪಾಲನ್ನು ಸರಿಯಾಗಿ ಪಡೆಯುತ್ತಿದ್ದಾರೆ ಎಂಬುದನ್ನು ದೃಢಪಡಿಸುವುದು ಕೂಡಾ ಅಷ್ಟೇ ಮುಖ್ಯ ಎಂದು ಅವರು ತಿಳಿಸಿದರು.







