ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಬದಲು ನ್ಯಾಷನಲ್ ಮೆಡಿಕಲ್ ಕಮಿಷನ್: ಮಸೂದೆಗೆ ಸಂಪುಟ ಅಸ್ತು

ಹೊಸದಿಲ್ಲಿ, ಡಿ. 16: ಈಗಿರುವ ಭಾರತೀಯ ವೈದ್ಯಕೀಯ ಮಂಡಳಿ (ಮೆಡಿಕಲ್ ಎಜುಕೇಶನ್ ರೆಗ್ಯುಲೇಟರ್ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ-ಎಂಸಿಐ) ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ನ್ಯಾಷನಲ್ ಮೆಡಿಕಲ್ ಕಮಿಷನ್) ಸ್ಥಾಪಿಸುವ ಮಸೂದೆಗೆ ಸಂಪುಟ ಶನಿವಾರ ಅನುಮೋದನೆ ನೀಡಿತು.
ವೈದ್ಯಕೀಯ ಸಂಸ್ಥೆಗಳಿಗೆ ಮಾನ್ಯತೆ ನೀಡುವುದು, ಪದವಿಪೂರ್ವ ಹಾಗೂ ಸ್ನಾತಕೋತ್ತರ ಶಿಕ್ಷಣ, ವೌಲ್ಯಮಾಪನ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಡಿಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ನೋಂದಣಿ ನಿರ್ವಹಿಸಲು ನಾಲ್ಕು ಸ್ವಾಯತ್ತ ಮಂಡಳಿ ರೂಪಿಸಲು ಈ ಮಸೂದೆ ಅವಕಾಶ ಕಲ್ಪಿಸಲಿದೆ. ಈ ಆಯೋಗ ಸರಕಾರದಿಂದ ನಾಮನಿರ್ದೇಶಿತ ಅಧ್ಯಕ್ಷರು, ಸದಸ್ಯರನ್ನು ಹೊಂದಲಿದೆ. ಸಂಪುಟ ಕಾರ್ಯದಶಿ ಅಡಿಯಲ್ಲಿ ಬರುವ ಶೋಧನಾ ಸಮಿತಿ ಈ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡಲಿದೆ. ಆಯೋಗದಲ್ಲಿ 5 ಮಂದಿ ಚುನಾಯಿತರು ಹಾಗೂ 12 ಮಂದಿ ನಿವೃತ್ತ ಅಧಿಕಾರಿಗಳು ಸದಸ್ಯರಾಗಿ ಇರಲಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಎಲ್ಲ ವೈದ್ಯಕೀಯ ಸ್ನಾತಕೋತ್ತರರು ಚಿಕಿತ್ಸೆ ನೀಡಲು ಪರವಾನಿಗೆ ಪಡೆಯಲು ಪರೀಕ್ಷೆ ನಡೆಸುವ ಪ್ರಸ್ತಾಪವನ್ನು ಈ ಮಸೂದೆ ಹೊಂದಿದೆ. ಈ ಪ್ರಸ್ತಾಪಿತ ಮಸೂದೆಯಂತೆ ಹೊಸ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಹಾಗೂ ಸೀಟಿನ ಸಂಖ್ಯೆ ಹೆಚ್ಚಿಸಲು ಯಾವುದೇ ಅನುಮತಿ ಅಗತ್ಯತೆ ಇಲ್ಲ.





