ಮಲ್ಪೆ: ಮನೆಯ ಕೊಟ್ಟಿಗೆಯಲ್ಲಿ ಮೂರು ಹೆಬ್ಬಾವುಗಳು ಪತ್ತೆ !

ಉಡುಪಿ, ಡಿ.16: ಮಲ್ಪೆ ಸಮೀಪದ ಪಂದುಬೆಟ್ಟು ಎಂಬಲ್ಲಿ ಮನೆಯೊಂದರ ಕೊಟ್ಟಿಗೆಯಲ್ಲಿ ಮೂರು ಹೆಬ್ಬಾವುಗಳು ಪತ್ತೆಯಾಗಿವೆ.
ಪಂದುಬೆಟ್ಟು ಖುರ್ಷಿದ್ ಬಾನು ಎಂಬವರ ಮನೆಯ ಸಮೀಪದಲ್ಲೇ ಇರುವ ಕೊಟ್ಟಿಗೆಯಿಂದ ಕಟ್ಟಿಗೆಗಳನ್ನು ತೆಗೆಯುತ್ತಿದ್ದಾಗ ಕಟ್ಟಿಗೆಯ ಅಡಿಯಲ್ಲಿ ಒಂದು ಹೆಬ್ಬಾವು ಕಾಣಿಸಿಕೊಂಡಿತ್ತು. ಇದರಿಂದ ಗಾಬರಿಗೊಂಡ ಮನೆಯ ವರು ಸ್ಥಳೀಯರಿಗೆ ತಿಳಿಸಿದರು. ಬಳಿಕ ಎಲ್ಲ ಕಟ್ಟಿಗೆಗಳನ್ನು ತೆಗೆದಾಗ ಅಲ್ಲಿ ಮೂರು ಹೆಬ್ಬಾವುಗಳು ಕಂಡುಬಂದವು.
ಭಯಭೀತರಾದ ಮನೆಯವರು ಮತ್ತು ಸ್ಥಳೀಯರು ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಮಾಹಿತಿ ನೀಡಿದರು. ಅವರು ಕೂಡಲೇ ಸ್ಥಳಕ್ಕೆ ತೆರಳಿ ಒಂದು ಹೆಣ್ಣು ಮತ್ತು ಎರಡು ಗಂಡು ಹೆಬ್ಬಾವುಗಳನ್ನು ಅಲ್ಲಿಂದ ರಕ್ಷಿಸಿದರು.
ಹೆಣ್ಣು ಹೆಬ್ಬಾವು 10-12 ಅಡಿ ಉದ್ದ ಇದ್ದರೆ, ಗಂಡು ಹೆಬ್ಬಾವುಗಳಲ್ಲಿ ಒಂದು 6, ಮತ್ತೊಂದು 7 ಅಡಿ ಉದ್ದ ಇದ್ದವು. ಒಂದೇ ಕಡೆಗಳಲ್ಲಿ ಮೂರು ಹೆಬ್ಬಾವುಗಳು ಪತ್ತೆಯಾಗಿರುವುದನ್ನು ವೀಕ್ಷಿಸಲು ಸ್ಥಳದಲ್ಲಿ ನೂರಾರು ಮಂದಿ ಕುತೂಹಲದಿಂದ ಸೇರಿದ್ದರು. ಬಳಿಕ ಗುರುರಾಜ್ ಸನಿಲ್ ಅರಣ್ಯ ಇಲಾಖೆ ಯ ಜೊತೆಗೂಡಿ ಈ ಹೆಬ್ಬಾವುಗಳನ್ನು ಪಶ್ಚಿಮ ಘಟ್ಟದ ಒಂದೇ ಸ್ಥಳದಲ್ಲಿ ಸಂಜೆ ವೇಳೆ ಬಿಟ್ಟರು.
‘ಡಿಸೆಂಬರ್‌ನಿಂದ ಜೂನ್‌ವರೆಗೆ ಹೆಬ್ಬಾವುಗಳ ಸಂತಾನೋತ್ಪತ್ತಿಯ ಕಾಲ. ಆದುದರಿಂದ ಅವುಗಳು ಡಿಸೆಂಬರ್‌ನಿಂದ ಮಾರ್ಚ್‌ವರಗೆ ಮಿಲನ ಕ್ರಿಯೆಯಲ್ಲಿ ತೊಡಗುತ್ತವೆ. ಹೀಗಾಗಿ ಹೆಬ್ಬಾವುಗಳು ಈಗ ಎಲ್ಲ ಕಡೆಗಳಲ್ಲಿ ಸಾಮಾನ್ಯ ವಾಗಿ ಕಂಡುಬರುತ್ತವೆ. ಅವುಗಳು ಯಾರಿಗೂ ತೊಂದರೆ ಮಾಡುವುದಿಲ್ಲ. ಅದರ ಕೆಲಸ ಆದ ಬಳಿಕ ಅವುಗಳು ಅಲ್ಲಿಂದ ನಿಗರ್ಮಿಸುತ್ತವೆ’ ಎಂದು ಉರಗ ತಜ್ಞ ಗುರುರಾಜ್ ಸನಿಲ್ ಪತ್ರಿಕೆಗೆ ತಿಳಿಸಿದರು.







