ವರದಕ್ಷಿಣೆ ಕಿರುಕುಳ: ಆರೋಪ ಸಾಬೀತು; ಸೋಮವಾರ ಶಿಕ್ಷೆ ಪ್ರಕಟ
ಮಂಗಳೂರು, ಡಿ. 16: ಹೆಚ್ಚಿನ ವರದಕ್ಷಿಣೆಗಾಗಿ ಮಾನಸಿಕ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣನಾಗಿದ್ದ ಆರೋಪಿಯ ಆರೋಪವು ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದೆ.
ಬಂಟ್ವಾಳ ತಾಲೂಕಿನ ಕನ್ಯಾನ ಕನಿಚ್ಚಾರು ನಿವಾಸಿ ದೇವಿಕುಮಾರ್ ಅಲಿಯಾಸ್ ಸುನೀಲ್ (38) ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಮೂಡಿಗೆರೆ ತಾಲೂಕು ಇರೇಬೈಲು ನಿವಾಸಿ ಸವಿತಾ (27) ಮೃತಪಟ್ಟ ಮಹಿಳೆ.
ಘಟನೆಯ ಹಿನ್ನೆಲೆ: ದೇವಿಕುಮಾರ್ ಮತ್ತು ಸವಿತಾ ಎಂಬವರ ವಿವಾಹ 2013ರ ಜೂ.3ರಂದು ಕಳಸದಲ್ಲಿ ನೆರವೇರಿತ್ತು. ಅವರು ಕನಿಚ್ಚಾರು ಸ್ವಂತ ಮನೆಯಲ್ಲಿ ವಾಸವಾಗಿದ್ದರು. ದೇವಿಕುಮಾರ್‌ನ ತಂದೆ-ತಾಯಿ ಮಂಗಳೂರಿನಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ದೇವಿಕುಮಾರ್ ಕುಡಿದು ಬಂದು ಸವಿತಾರೊಂದಿಗೆ ಜಗಳವಾಡುತ್ತಿದ್ದ. ಇವರ ಜಗಳ ನಿತ್ಯ ಮುಂದುವರಿದಿತ್ತು. ವರದಕ್ಷಿಣೆಗಾಗಿ ಪೀಡಿಸಿ ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದ. ಇದೇ ನೆಪದಲ್ಲಿ 2014ರ ಫೆ.20ರಂದು ರಾತ್ರಿ 8ಗಂಟೆಗೆ ದೇವಿಕುಮಾರ್ ತನ್ನ ಹೆಂಡತಿ ಸವಿತಾರೊಂದಿಗೆ ಗಲಾಟೆ ಮಾಡಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಕುಸಿದು ಬಿದ್ದಿದ್ದಾಳೆಂದು ನೆರೆಮನೆಯವರಿಗೆ ನಂಬಿಸುತ್ತಾನೆ. ಸವಿತಾರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಸವಿತಾ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ಡಿವೈಎಸ್ಪಿಯಾಗಿದ್ದ ರಶ್ಮಿ ಪರಡ್ಡಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸವಿತಾಳದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ಆರೋಪಿ ದೇವಿಕುಮಾರ್ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ. ಪ್ರಕರಣವನ್ನು ಸೂಕ್ಷ್ಮವಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶ ಡಿ.ಟಿ. ಪುಟ್ಟರಂಗಸ್ವಾಮಿ ಅವರು, ಆರೋಪಿಯ ಐಪಿಸಿ ಸೆಕ್ಷನ್ 498(ಎ)ರಡಿ ವರದಕ್ಷಿಣೆ ಕಿರುಕುಳ, ಸೆ.304(13)ದಡಿ ವರದಕ್ಷಿಣೆ ಸಾವು, ವರದಕ್ಷಿಣೆ ಬೇಡಿಕೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಡಿ.18ಕ್ಕೆ ಮುಂದೂಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು







