ಜಾವಾ ದ್ವೀಪದಲ್ಲಿ ಪ್ರಬಲ ಭೂಕಂಪ
3 ಸಾವು; ನೂರಾರು ಕಟ್ಟಡಗಳು ನೆಲಸಮ

ಜಕಾರ್ತ (ಇಂಡೋನೇಶ್ಯ), ಡಿ. 16: ಶುಕ್ರವಾರ ಮಧ್ಯರಾತ್ರಿಗೆ ಕೊಂಚ ಮೊದಲು ಇಂಡೋನೇಶ್ಯದ ಜಾವಾ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 6.5ರಷ್ಟು ತೀವ್ರತೆ ಹೊಂದಿದ್ದ ಪ್ರಬಲ ಭೂಕಂಪ ಸಂಭವಿಸಿದೆ.
ಭೂಕಂಪದಿಂದಾಗಿ ಮೂವರು ಮೃತಪಟ್ಟಿದ್ದು, ನೂರಾರು ಕಟ್ಟಡಗಳು ಹಾನಿಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಭೂಕಂಪದ ಕೇಂದ್ರ ಬಿಂದು ತಸಿಕ್‌ಮಲಯದಿಂದ ಆಗ್ನೇಯಕ್ಕೆ 52 ಕಿ.ಮೀ. ದೂರದಲ್ಲಿ 92 ಕಿ.ಮೀ. ಆಳದಲ್ಲಿತ್ತು ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿದೆ.
ಪಶ್ಚಿಮ ಮತ್ತು ಮಧ್ಯ ಜಾವಾದಲ್ಲಿನ ಶಾಲೆಗಳು, ಆಸ್ಪತ್ರೆಗಳು ಮತ್ತು ಸರಕಾರಿ ಕಚೇರಿಗಳು ಸೇರಿದಂತೆ ನೂರಾರು ಕಟ್ಟಡಗಳು ಹಾನಿಗೀಡಾಗಿವೆ.
ಬನ್ಯುಮನ್ ಪ್ರಾಂತದಲ್ಲಿರುವ ಆಸ್ಪತ್ರೆಯೊಂದರಿಂದ ಡಝನ್‌ಗಟ್ಟಳೆ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಯಿತು. ಈಗ ಅವರಿಗೆ ಡೇರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸುನಾಮಿ ಎಚ್ಚರಿಕೆ
ಭೂಕಂಪವು ದಕ್ಷಿಣ ಜಾವಾದಲ್ಲಿರುವ ಸುನಾಮಿ ಎಚ್ಚರಿಕೆ ವ್ಯವಸ್ಥೆಗಳನ್ನು ಜಾಗೃತಗೊಳಿಸಿತು ಹಾಗೂ ಕರಾವಳಿ ವಲಯದಲ್ಲಿ ವಾಸಿಸುತ್ತಿರುವ ಸಾವಿರಾರು ಮಂದಿ ಎತ್ತರದ ಪ್ರದೇಶಗಳಿಗೆ ಧಾವಿಸಿದರು ಎಂದು ಇಂಡೋನೇಶ್ಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಆದರೆ, ಈ ಭೂಕಂಪದಲ್ಲಿ ಸುನಾಮಿ ಅಲೆಗಳು ಹುಟ್ಟಿಕೊಂಡಿಲ್ಲ.







