349 ಎಫ್‌ಡಿಸಿ ಔಷಧಿಗಳ ಮರುಪರಿಶೀಲನೆಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಡಿ.16: 349 ನಿಗದಿತ ಪ್ರಮಾಣ ಸಯೋಜನೆಯ (ಫಿಕ್ಸ್ಡ್ ಡೋಸ್ ಕಾಂಬಿನೇಶನ್) (ಎಫ್‌ಡಿಸಿ) ಮೇಲಿದ್ದ ನಿಷೇಧವನ್ನು ತಳ್ಳ್ಳಿಹಾಕಿದ ದಿಲ್ಲಿ ಉಚ್ಛನ್ಯಾಯಾಲಯದ ದೇಶದ ವಿರುದ್ಧ ತೀರ್ಪು ನೀಡಿರುವ ಸರ್ವೋಚ್ಛ ನ್ಯಾಯಾಲಯವು ಈ ಔಷಧಿಗಳನ್ನು ಮರುಪರೀಕ್ಷಿಸುವಂತೆ ಔಷಧಿ ಸಲಹಾ ಮಂಡಳಿಗೆ ಸೂಚಿಸಿದ್ದು ಇದರಿಂದ ಔಷಧಿ ಉತ್ಪಾದನಾ ಸಂಸ್ಥೆಗಳಿಗೆ ಹಿನ್ನಡೆಯುಂಟಾಗಿದೆ.
ಪ್ರಸಿದ್ಧ ಬ್ರಾಂಡ್‌ಗಳಾದ ಕೋರೆಕ್ಸ್ ಕಫ್ ಸಿರಪ್ ಮತ್ತು ವಿಕ್ಸ್ ಆ್ಯಕ್ಷನ್ 500 ಎಕ್ಸ್ಟ್ರಾ ಮತ್ತು ಮಧುಮೇಹ ನಿಗ್ರಹ ಔಷಧಿಗಳು ಸೇರಿದಂತೆ ಹಲವು ಎಫ್‌ಡಿಸಿ ಔಷಧಿಗಳು ಮಾನವನಿಗೆ ಮಾರಕವಾಗಿದೆ ಮತ್ತು ಅವುಗಳ ಸುರಕ್ಷಿತ ಪರ್ಯಾಯ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಔಷಧಿಗಳನ್ನು ನಿಷೇಧಿಸಿತ್ತು.
ಶುಕ್ರವಾರದಂದು ಕೇಂದ್ರದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆರ್‌ಎಫ್ ನರಿಮನ್ ಮತ್ತು ಎಸ್‌ಕೆ ಕೌಲ್ ನೇತೃತ್ವದ ನ್ಯಾಯಪೀಠವು ಔಷಧಿ ಮತ್ತು ಸೌಂದರ್ಯವರ್ಧಕ ಕಾಯ್ದೆಯಲ್ಲಿ ಅಗತ್ಯವಿರುವ ಪ್ರಕ್ರಿಯೆಯನ್ನು ಪಾಲಿಸಲಾಗಿಲ್ಲ ಎಂಬ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯದ ಆದೇಶವನ್ನು ಬದಿಗಿರಿಸಿತ್ತು ಮತ್ತು ಈ ಔಷಧಿಗಳ ಮರುಪರೀಕ್ಷೆ ನಡೆಸುವಂತೆ ಔಷಧಿ ತಾಂತ್ರಿಕ ಸಲಹಾ ಸಮಿತಿಗೆ (ಡಿಟಿಎಬಿ) ಸೂಚಿಸಿತ್ತು.
ಕೇಂದ್ರವು ಕೊಕಟೆ ಸಮಿತಿಯ ಸಲಹೆಯಂತೆ ಈ ಔಷಧಿಗಳನ್ನು ಮಾರ್ಚ್10, 2016ರಲ್ಲಿ ಈ ಎಫ್‌ಡಿಸಿ ಔಷಧಿಗಳನ್ನು ನಿಷೇಧಿಸಿತ್ತು. ಡಿಟಿಎಬಿ ಅಥವಾ ಅದರ ಉಪಸಮಿತಿಯು ಔಷಧಿ ಉತ್ಪಾದಕರು ಮತ್ತು ಸರಕಾರೇತರ ಸಂಸ್ಥೆ ಆಲ್ ಇಂಡಿಯಾ ಡ್ರಗ್ಸ್ ಆ್ಯಕ್ಷನ್ ನೆಟ್ವರ್ಕ್ ಸಲ್ಲಿಸುವ ಅಹವಾಲನ್ನು ಕೂಡಾ ಆಲಿಸುವುದು ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.
ಎಫ್‌ಡಿಸಿಗಳಲ್ಲಿ ಕಂಪೆನಿಗಳು ಹೇಳಿಕೊಳ್ಳುವಂತಹ ಚಿಕಿತ್ಸಾತ್ಮಕ ವೌಲ್ಯಗಳು ಇಲ್ಲ ಮತ್ತು ಇಂತಹ ಎಫ್‌ಡಿಸಿಗಳು ಚಿಕಿತ್ಸಾತ್ಮಕವಾಗಿ ಸಮರ್ಥನೆ ನೀಡಬಹುದಾದಷ್ಟು ಪ್ರಮಾಣದಲ್ಲಿ ಮೂಲ ಪದಾರ್ಥಗಳನ್ನು ಹೊಂದಿದೆಯೇ ಎಂಬುದು ಕೂಡಾ ಸ್ಪಷ್ಟವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಹಾಗಾಗಿ ಸಮಾಜದ ಹಿತದೃಷ್ಟಿಯಿಂದ ಇಂತಹ ಔಷಧಿಗಳ ಉತ್ಪಾದನೆ, ಮಾರಾಟ ಮತ್ತು ಹಂಚಿಕೆಯನ್ನು ನಿಷೇಧಿಸುವ ಅಗತ್ಯವಿದೆಯೇ ಎಂಬುದನ್ನು ಡಿಟಿಎಬಿ ನಿರ್ಧರಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.







