ಬೆಳ್ತಂಗಡಿ: ಗ್ರಾ.ಪಂ. ನೌಕರನ ಮೇಲೆ ಹಲ್ಲೆ; ದೂರು ದಾಖಲು
ಬೆಳ್ತಂಗಡಿ, ಡಿ. 16: ಕುಡಿಯುವ ನೀರು ಬಿಡುವ ವಿಚಾರದಲ್ಲಿ ಪಂಪ್ ಆಪರೇಟರ್ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆಗೈದ ಘಟನೆ ಶುಕ್ರವಾರ ರಾತ್ರಿ ವೇಣೂರು ಠಾಣಾ ವ್ಯಾಪ್ತಿಯ ಬಡಗಕಾರಂದೂರಿನ ಮುಳ್ಳಗುಡ್ಡೆ ಎಂಬಲ್ಲಿ ನಡೆದಿದೆ.
ಅಳದಂಗಡಿ ಗ್ರಾಮ ಪಂ. ಪಂಪ್ ಆಪರೇಟರ್ ಮೂಡಯಿಹಿತ್ತಿಲು ಕೃಷ್ಣ ಎಂಬವರ ಮೇಲೆ ಸ್ಥಳೀಯ ನಿವಾಸಿ ಮುರಳಿ ಹೆಗಡೆ ಎಂಬವರು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಕೆದ್ದು ಎಂಬಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಗ್ರಾಮ ಪಂ. ಕುಡಿಯುವ ನೀರಿನ ಪೈಪು ಒಡೆದು ಹೋಗಿದ್ದರಿಂದ ನೀರು ಸರಬರಾಜು ವ್ಯತ್ಯಯ ಉಂಟಾಗಿತ್ತು. ಕಳೆದ ಮೂರು ದಿನಗಳಿಂದ ನೀರು ಬಾರದೆ ಇರುವುದನ್ನು ವಿಚಾರಿಸಿ ಅವ್ಯಾಚ ಶಬ್ದಗಳಿಂದ ಬೈದು, ಜಾತಿ ನಿಂದನೆ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಕೃಷ್ಣ ಅವರು ವೇಣೂರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನಂತೆ ವೇಣೂರು ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ. ಗ್ರಾಮ ಪಂ. ನೌಕರರ ಸಂಘದ ಪದಾಧಿಕಾರಿಗಳು ಹಾಗೂ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.





