ಸಾವಿನ ವಿಚಾರದಲ್ಲಿ ಬಿಜೆಪಿ ರಾಜಕೀಯ : ಆರೋಪ
ರಕ್ಷಣೆ ಕೋರಿ ಯೋಗೀಶ್‌ಗೌಡ ಪತ್ನಿ ಮಲ್ಲವ್ವ ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು, ಡಿ. 16: ಇತ್ತೀಚೆಗೆ ಕೊಲೆಯಾದ ಧಾರವಾಡ ಜಿ.ಪಂ.ನ ಹೆಬ್ಬಳ್ಳಿ ಸದಸ್ಯ ಯೋಗೀಶ್ ಗೌಡ ಅವರ ಪತ್ನಿ ಮಲ್ಲವ್ವ, ತನಗೆ ಬಿಜೆಪಿ ಮುಖಂಡರು ಹಾಗೂ ಭಾವನ ಮನೆಯವರಿಂದ ಕೊಲೆ ಬೆದರಿಕೆ ಇದೆ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ತನ್ನ ಪತಿ ಯೋಗೀಶ್ ಗೌಡ ಕೊಲೆ ಬಳಿಕ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯಿಸಿದ್ದ ಬಸವರಾಜ ಕೊರವರ ಹಾಗೂ ಅಮೃತ ದೇಸಾಯಿ ನನ್ನ ಪತಿ ಸಂಪಾದಿಸಿದ್ದ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇವರಿಬ್ಬರೂ ನನ್ನ ಭಾವ ಗುರುನಾಥಗೌಡ ಜತೆ ಸೇರಿ ನನಗೆ ಮೋಸ ಮಾಡಿದ್ದಾರೆಂದು ಮಲ್ಲವ್ವ ದೂರಿನಲ್ಲಿ ಹೇಳಿದ್ದಾರೆ.
ಪತಿ ಯೋಗೀಶ್‌ಗೌಡ ಸಾವಿನ ಹೆಸರಿನಲ್ಲಿ ಬಿಜೆಪಿ ಮುಖಂಡರು ರಾಜಕೀಯ ಮಾಡುತ್ತಿದ್ದು, ಮಾನಸಿಕ ಹಿಂಸೆಯಾಗುತ್ತಿದೆ. ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಭಾವ ಗುರುನಾಥಗೌಡ 2 ತಿಂಗಳಿನಿಂದ ಪದೇ ಪದೇ ಫೋನ್ ಮಾಡಿ ಯಾರೊಂದಿಗೂ ಮಾತನಾಡಬೇಡ ಎಂದು ಪೀಡಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ನನ್ನ ಪರಿಚಿತರ ಮೇಲೆ ಹಲ್ಲೆ ನಡೆಸುತ್ತಿದ್ದು, ವೈಯಕ್ತಿಕ ಕೆಲಸಗಳಿಗೂ ಅಡ್ಡಿಪಡಿಸುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ತನಗೆ ನ್ಯಾಯ ಒದಗಿಸಬೇಕು. ಬಿಜೆಪಿ ಮುಖಂಡರಿಂದ ತನಗೆ ಹಾಗೂ ತನ್ನ ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿ ಮಲ್ಲವ್ವ, ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.







