ಗುಜರಾತ್ ನಲ್ಲಿ ತನ್ನ ಪಕ್ಷ ಸೋಲುಣ್ಣಲಿದೆ: ಬಿಜೆಪಿ ಸಂಸದ

ಅಹ್ಮದಾಬಾದ್, ಡಿ.16: ಗುಜರಾತ್ ಚುನಾವಣೆಯ ಮತ ಎಣಿಕೆಗೆ ಇನ್ನೇನು ಎರಡು ದಿನಗಳು ಇವೆಯಷ್ಟೇ. ಮಾಧ್ಯಮಗಳು ನಡೆಸಿರುವ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಈ ಬಾರಿಯೂ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸರಕಾರ ರಚಿಸಲಿದೆ ಎಂದು ಹೇಳಲಾಗಿದೆ. ಆದರೆ ಇವೆಲ್ಲದರ ಮಧ್ಯೆ ಖುದ್ದು ಬಿಜೆಪಿ ಸಂಸದರೊಬ್ಬರು ಈ ಬಾರಿ ಗುಜರಾತ್‌ನಲ್ಲಿ ತಮ್ಮ ಪಕ್ಷವು ಸೋಲನುಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪುಣೆಯು ಬಿಜೆಪಿ ಸಂಸದ ಸಂಜಯ್ ಕಾಕಡೆ ಈ ರೀತಿ ಹೇಳಿಕೆ ನೀಡಿದ್ದು ತನ್ನ ತಂಡವು ರಾಜ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿರುವುದಾಗಿ ತಿಳಿಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕಾಕಡೆ, ರಾಜ್ಯದಲ್ಲಿ ಪಕ್ಷವು ನಡೆಸಿದ ಕೋಮ ಆಧಾರಿತ ಚುನಾವಣಾ ಅಭಿಯಾನವೇ ಅದರ ಸೋಲಿಗೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.
ತನ್ನ ಹೇಳಿಕೆಗೆ ಎರಡು ಕಾರಣಗಳನ್ನು ನೀಡಿರುವ ಕಾಕಡೆ, ತನ್ನ ತಂಡದ ಸಮೀಕ್ಷೆ ಪ್ರಕಾರ ಗುಜರಾತ್‌ನ ಶೇಕಡಾ 75 ಜನರು ವಿಶೇಷವಾಗಿ ದಲಿತರು, ಇತರ ಹಿಂದುಳಿದ ವರ್ಗಗಳ ಜನರು, ಮುಸ್ಲಿಮರು ಮತ್ತು ಪಟೇಲ್ ಸಮುದಾಯ ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಬಿಜೆಪಿಯು ರಾಜ್ಯದಲ್ಲಿ ನಡೆಸಿದ ಚುನಾವಣಾ ರ್ಯಾಲಿಗಳು ಮತ್ತು ಸಭೆಗಳಲ್ಲಿ ಅಭಿವೃದ್ಧಿ ಕುರಿತು ಒಂದು ಶಬ್ದವನ್ನೂ ಮಾತನಾಡಿಲ್ಲ ಎಂದು ಕಾಕಡೆ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಈ ಬಾರಿ ಗುಜರಾತ್‌ನಲ್ಲಿ ಪಕ್ಷದ ಸ್ಥಿತಿ ತುಂಬಾ ಗಂಭೀರವಾಗಿದೆ. ಅತ್ಯಂತ ಸುದೀರ್ಘ ಕಾಲದಿಂದ ಆಡಳಿತದಲ್ಲಿದ್ದ ನಮ್ಮ ಪಕ್ಷವು ಈ ಬಾರಿ ಆಡಳಿತವಿರೋಧಿ ಅಲೆಯನ್ನು ಎದುರಿಸುವ ಸಾಧ್ಯತೆಯಿದೆ. ಇದಕ್ಕೂ ಮುಖ್ಯವಾಗಿ ಮುಸ್ಲಿಮರು ನಮ್ಮ ಪಕ್ಷದ ಬಗ್ಗೆ ಸಂತುಷ್ಟರಾಗಿಲ್ಲ. ಮೋದಿ ಪ್ರಧಾನಿಯಾದಂದಿನಿಂದ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ರಾಜ್ಯದ ಬಗ್ಗೆ ಗಮನ ನೀಡುತ್ತಿದ್ದಷ್ಟು ನೀಡಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಒಬ್ಬ ನಾಯಕನೂ ಸಿಕ್ಕಿಲ್ಲ. ಇತ್ತೀಚೆಗೆ ಹಾರ್ದಿಕ್ ಪಟೇಲ್‌ರನ್ನು ಸೆಕ್ಸ್ ಸಿಡಿ ಬಿಡುಗಡೆಗೊಳಿಸುವ ಮೂಲಕ ಅವಮಾನಗೊಳಿಸಲು ನಡೆಸಿದ ಪ್ರಯತ್ನ ಕೂಡಾ ಒಂದು ತಪ್ಪು. ಇಡೀ ಅಭಿಯಾನದಲ್ಲಿ ಅಭಿವೃದ್ಧಿ ಬಗ್ಗೆ ಎಲ್ಲೂ ಯಾರೂ ಮಾತನಾಡಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಬಿಜೆಪಿ ಈ ಬಾರಿ ಗುಜರಾತ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಲಿದೆ ಎಂದು ನನ್ನ ತಂಡ ತಿಳಿಸಿರುವುದಾಗಿ ಕಾಕಡೆ ತಿಳಿಸಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಆದರೆ ಒಂದು ವೇಳೆ ಗುಜರಾತ್‌ನಲ್ಲಿ ಬಿಜೆಪಿ ಗೆದ್ದರೆ ದೇಶದಲ್ಲಿ ಯಾವುದೇ ರಾಜ್ಯವನ್ನು 25 ವರ್ಷಗಳ ಕಾಲ ಆಳಿದ ಮೊದಲ ಪಕ್ಷ ಬಿಜೆಪಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಜೊತೆಗೆ ಈ ಗೆಲುವಿನಿಂದ ಪ್ರಧಾನಿ ನರೇಂದ್ರ ಮೋದಿಯವರು ಗಾಂಧಿ-ನೆಹರೂ ವಂಶದ ಎಲ್ಲಾ ನಾಯಕರಿಗಿಂತಲೂ ದೊಡ್ಡ ನಾಯಕರಾಗಿ ಹೊರಹೊಮ್ಮಲಿದ್ದಾರೆ ಎಂದು ಕಾಕಡೆ ತಿಳಿಸಿದ್ದಾರೆ.







