ರಾಹುಲ್ ಅಲ್ಲ, ಕಾಂಗ್ರೆಸ್ ನ ಅತ್ಯಂತ ಕಿರಿಯ ಅಧ್ಯಕ್ಷ ಯಾರು ಗೊತ್ತೇ ?

ಹೊಸದಿಲ್ಲಿ, ಡಿ. 16: ರಾಹುಲ್‍ಗಾಂಧಿ ಕಾಂಗ್ರೆಸ್‍ನ ಯುವ ಮುಖವಾಗಿರಬಹುದು ಹಾಗೂ ಪಕ್ಷಕ್ಕೆ ಹೊಸ ಮುಖಗಳನ್ನು ಆಕರ್ಷಿಸಿರಬಹುದು. ಆದರೆ ರಾಹುಲ್‍ಗಾಂಧಿ (47) ಕಾಂಗ್ರೆಸ್‍ನ ಅತ್ಯಂತ ಯುವ ಅಧ್ಯಕ್ಷರಲ್ಲ ಎನ್ನುವ ವಾಸ್ತವ ನಿಮಗೆ ಗೊತ್ತೇ?
ರಾಹುಲ್‍ಗಾಂಧಿಗಿಂತಲೂ ಯುವ ವಯಸ್ಸಿನಲ್ಲೇ ಪಕ್ಷದ ಅಧ್ಯಕ್ಷ ಹುದ್ದೆ ಅಲಂಕರಿಸಿದವರು ಹಲವು ಮಂದಿ ಇದ್ದಾರೆ. ಅಂತೆಯೇ ನೆಹರೂ ಕುಟುಂಬದಲ್ಲಿ ಕೂಡಾ ರಾಹುಲ್ ಯುವ ಅಧ್ಯಕ್ಷರೇನಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಪಕ್ಷದ ಅಧ್ಯಕ್ಷ ಹುದ್ದೆ ಅಲಂಕರಿಸಿದ ದಾಖಲೆ ಇರುವುದು ಮೌಲಾನಾ ಅಬ್ದುಲ್ ಕಲಾಂ ಆಝಾದ್ ಹೆಸರಿನಲ್ಲಿ. ಅವರು 35ನೇ ವರ್ಷವೇ ಪಕ್ಷದ ಉನ್ನತ ಹುದ್ದೆ ಅಲಂಕರಿಸಿದ್ದರು. 1923ರ ದೆಹಲಿ ಅಧಿವೇಶನದ ಅಧ್ಯಕ್ಷತೆಯನ್ನೂ ಅವರು ವಹಿಸಿದ್ದರು. ಸ್ವಾತಂತ್ರ್ಯಾ ನಂತರ ಆಝಾದ್ ಭಾರತದ ಮೊಟ್ಟಮೊದಲ ಶಿಕ್ಷಣ ಸಚಿವರಾದರು.
ಆಝಾದ್ ದೆಹಲಿ ಅಧಿವೇಶನದ ಅಧ್ಯಕ್ಷತೆ ವಹಿಸಿದ ಐದು ವರ್ಷದ ಬಳಿಕ ರಾಹುಲ್ ಅವರ ಮುತ್ತಜ್ಜ ಜವಾಹರಲಾಲ್ ನೆಹರೂ ಮೊದಲ ಬಾರಿಗೆ ಪಕ್ಷದ ಅಧ್ಯಕ್ಷರಾದರು. ಅವರು 1929ರ ಲಾಹೋರ್ ಅಧಿವೇಶನದಲ್ಲಿ ಪಕ್ಷಾಧ್ಯಕ್ಷರಾಗಿ ಆಯ್ಕೆಯಾದಾಗ ಅವರಿಗೆ 40 ವರ್ಷ ವಯಸ್ಸು.
ನೆಹರೂ ಅವರ ಹಿಂದಿನ ವರ್ಷ ಮೋತಿಲಾಲ್ ನೆಹರೂ ಅಧ್ಯಕ್ಷರಾಗಿದ್ದರು. ಆಗ ಅವರಿಗೆ 67 ವರ್ಷ ವಯಸ್ಸು. ನೆಹರೂ ಬಳಿಕ ಪಕ್ಷಾಧ್ಯಕ್ಷ ಹುದ್ದೆ ಅಲಂಕರಿಸಿದವರು ಇಂದಿರಾಗಾಂಧಿ 1959ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾದಾಗ ಅವರಿಗೆ 42 ವರ್ಷ ವಯಸ್ಸು. 1984ರಲ್ಲಿ ಹತ್ಯೆಯಾಗುವ ಮುನ್ನ ಅವರು ಆರು ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಬಳಿಕ ಅಧ್ಯಕ್ಷರಾದ ರಾಜೀವ್‍ಗಾಂಧಿಗೆ 41 ವರ್ಷ ವಯಸ್ಸಾಗಿತ್ತು.







