ಗಳಿಸಿದ್ದು ಮುಖ್ಯವಲ್ಲ, ಸಾಧಿಸಿದ್ದು ಮುಖ್ಯ-ಎಂ.ಎಂ ಚೆಂಗಪ್ಪ
ಪುತ್ತೂರು ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಪುತ್ತೂರು, ಡಿ. 17: ರೋಟರಿ ಫೌಂಡೇಶನ್‌ಗೆ ರೋಟೆರಿಯನ್ಸ್‌ಗಳು ಕೊಡುವ ಯಾವುದೇ ದೇಣಿಗೆ ಬಹಳ ಮೌಲ್ಯಯುತವಾದದ್ದು. ಸಾಮಾಜಿಕ ಕಾರ್ಯ ಚಟುಚಟಿಕೆಗಳಿಗೆ ಮನುಷ್ಯನು ನೀಡುವ ಕಾಣಿಕೆಯನ್ನು ದೇವರು ಕೂಡ ಮೆಚ್ಚುತ್ತಾನೆ. ಆದ್ದರಿಂದ ನಾವು ಗಳಿಸಿದ್ದು ಮುಖ್ಯವಲ್ಲ ಬದಲಾಗಿ ಏನನ್ನೂ ಸಾಧಿಸಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದು ಆರ್.ಐ ಜಿಲ್ಲೆ 3181, ವಲಯ ಐದರ ರೋಟರಿ ಜಿಲ್ಲಾ ಗವರ್ನರ್ ಎಂ.ಎಂ ಸುರೇಶ್ ಚೆಂಗಪ್ಪ ಹೇಳಿದರು.
ಅವರು ಶನಿವಾರ ಪುತ್ತೂರು ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಸಂಜೆ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾರದರ್ಶಕತೆಯುಳ್ಳ ಅತ್ತ್ಯುತ್ತಮ ಸಂಸ್ಥೆಯೆನಿಸಿರುವ ರೋಟರಿ ಸಂಸ್ಥೆಯು ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿದೆ. ರೋಟರಿ ಸಂಸ್ಥೆಯ ಮೂಲಕ ಸಮಾಜ ಸೇವೆಯನ್ನು ಮಾಡುವ ಮೂಲಕ ರೊಟೇರಿಯನ್ಸ್‌ಗಳು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳಾಗಿ ಗೋಚರಿಸುತ್ತಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ಕೊಡುಗೆಯನ್ನು ನೀಡುವುದು ಒಂದು ದೀಕ್ಷೆ ಎನಿಸುತ್ತಿದೆ ಎಂದರು.
ಧರ್ಮ ಹಾಗೂ ಜಾತಿ ಎಂಬ ವಿಂಗಡಣೆ ಬೇಡ. ನಾವೆಲ್ಲರೂ ಒಂದೇ ಎಂಬ ಮನೋಭಾವನೆ ನಮ್ಮದಾಗಬೇಕು. ಜೀವನದಲ್ಲಿ ಕಷ್ಟ ಏನೆಂದು ಅರಿವಾಗಬೇಕಾದರೆ ಭಾರತ ಗಡಿಯಲ್ಲಿ ನಮಗೋಸ್ಕರ ಹೋರಾಡುವ ಸೈನಿಕರ ಜೀವನ ಕಷ್ಟಗಳು ನಮ್ಮ ಮನಸ್ಸಿಗೆ ಮೂಡಬೇಕು. ಕನಿಷ್ಟ ಸೆಂಟಿಗ್ರೇಡ್ ಹವಾಮಾನದಲ್ಲಿ ಜೀವದ ಹಂಗು ತೊರೆದು ಎದುರಾಳಿಗಳೊಂದಿಗೆ ಹೋರಾಡಿ ಭಾರತ ದೇಶವನ್ನು ರಕ್ಷಣೆ ಮಾಡುವ ಒಬ್ಬೊಬ್ಬ ಸೈನಿಕರದ್ದು ಒಂದೊಂದು ಕಥೆ. ಸೈನಿಕರ ಜೀವನಗಾಥೆಯನ್ನು ನಾವು ಅರ್ಥೈಸದೆ ಇಲ್ಲಿ ಜಾತಿ-ಧರ್ಮ ಎಂದು ಕಿತ್ತಾಡುವುದು ಎಷ್ಟು ಸರಿ?. ರೋಟರಿ ಪುತ್ತೂರು ಸಂಸ್ಥೆಯು ಜನರಿಗೆ ಅತೀ ಅಗತ್ಯವಾಗಿರುವ ಬ್ಲಡ್ ಬ್ಯಾಂಕ್‌ನ್ನು ಮೇಲ್ದರ್ಜೆಗೇರಿಸಿದ್ದು, ನಮ್ಮ ಕಸ-ನಮ್ಮ ಜವಾಬ್ದಾರಿ ಮೂಲಕ ಜನರಿಗೆ ಜವಾಬ್ದಾರಿ ಕುರಿತು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅಲ್ಲದೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮನುಷ್ಯನ ಅಂತರಂಗದಲ್ಲಿರುವ ಇಂದ್ರೀಯಗಳನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಅವರು ಹೇಳಿದರು.
ವಲಯ ಐದರ ಅಸಿಸ್ಟೆಂಟ್ ಗವರ್ನರ್ ವಿಶ್ವಾಸ್ ಶೆಣೈ ಮಾತನಾಡಿ, ಪ್ರಸ್ತುತ ಆಮೇರಿಕದಲ್ಲಿ ನೆಲೆಸಿರುವ ಮಹಾ ದಾನಿ ವಿನಾಯಕ ಕುಡ್ವರವರು ತಮ್ಮ ಸಂಪಾದನೆಯನ್ನು ಯಾರಿಗೂ ತಿಳಿಯದ ರೀತಿಯಲ್ಲಿ ಇಲ್ಲಿನ ಬಡವರಿಗೆ ಹಂಚುತ್ತಿದ್ದರು. ಇದೀಗ ರೋಟರಿ ಸಂಸ್ಥೆಯ ಮೂಲಕ ಆ ಕೆಲಸವನ್ನು ಮಾಡುತ್ತಿದ್ದಾರೆ. ವಿನಾಯಕ ಕುಡ್ವರವರಿಂದ ಸಹಾಯಹಸ್ತವನ್ನು ಪಡೆದುಕೊಂಡವರು ಇಂದು ಆಮೇರಿಕ ಹಾಗೂ ದೇಶದ ವಿವಿಧೆಡೆ ಒಳ್ಳೆಯ ಕೆಲಸವನ್ನು ನಿರ್ವಹಿಸುತ್ತಾ ವಿದೇಶಗಳಲ್ಲಿ ನೆಲೆಸಿದ್ದಾರೆ ಮಾತ್ರವಲ್ಲ ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸುವಲ್ಲಿ ವಿನಾಯಕ ಕುಡ್ವರವರ ಪಾತ್ರ ಬಹಳ ಮುಖ್ಯವಾಗಿದೆ ಎಂದ ಅವರು ರೋಟರಿ ಗವರ್ನರ್ ಅಧಿಕೃತ ಭೇಟಿ ಎಂದರೆ ಎಲ್ಲರಿಗೂ ಖುಶಿ ಕೊಡುವಂತಹುದು. ರೋಟರಿ ಮೂಲಕ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿರುವುದು ರೊಟೇರಿಯನ್ಸ್‌ಗಳಿಗೆ ಒಳ್ಳೆಯ ಅವಕಾಶವಾಗಿದೆ ಎಂದು ಅವರು ಹೇಳಿದರು.
ಸೇನಾನಿ ಮಹಾಬಲ ಗೌಡ ಎ. ಮಾತನಾಡಿ ಬ್ಲಡ್ ಬ್ಯಾಂಕ್‌ನಿಂದಾಗಿ ಇಂದು ರೋಟರಿ ಕ್ಲಬ್‌ಗಳು ಸಮಾಜದಲ್ಲಿ ಗುರುತಿಸುವಂತಾಗಿದೆ. ಮನುಷ್ಯನಿಗೆ ರಕ್ತ ಎನ್ನುವುದು ಅಗತ್ಯದ ಬೇಡಿಕೆಯಾಗಿದೆ. ಹಿಂದೆ ಅಗತ್ಯ ಸಂದರ್ಭದಲ್ಲಿ ರಕ್ತ ಬೇಕೆಂದಾಗ ದೂರದ ಊರುಗಳನ್ನು ಆಶ್ರಯಿಸಬೇಕಿತ್ತು. ಆದರೆ ಇಂದು ಆ ಕಷ್ಟ ಬ್ಲಡ್ ಬ್ಯಾಂಕ್ ಮೇಲ್ದರ್ಜೆಗೇರಿದ ಬಳಿಕ ಬಹುತೇಕ ನೀಗಿದೆ. ಪುತ್ತೂರು ರೋಟರಿ ಕ್ಲಬ್‌ರವರು ಬಹು ಅಗತ್ಯವೆನಿಸಿದ ಬ್ಲಡ್ ಬ್ಯಾಂಕ್‌ನ್ನು ಪುತ್ತೂರಿಗೆ ಕರುಣಿಸಿದ್ದು ಪುತ್ತೂರಿನ ಜನರ ಭಾಗ್ಯ ಎಂದೇ ಹೇಳಬಹುದು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಎ.ಜೆ ರೈ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.







