ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆ

ಭಟ್ಕಳ, ಡಿ. 17: ಇಲ್ಲಿನ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆ ಕಾರ್ಯಕ್ರಮ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಅಂಜುಮನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್.ಎಂ ಸೈಯದ್ ಅಬ್ದುರ್ರಹ್ಮಾನ್ ಬಾತಿನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿಕ್ಷಕರು ತಮ್ಮ ವೃತ್ತಿಯಲ್ಲಿ ಕೌಶಲ್ಯತೆ ಹೊಂದುವುದರ ಜತೆಗೆ ವೃತ್ತಿಯ ಪಾವಿತ್ರ್ಯತೆ ಉಳಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪಿ.ಕೆ ಪ್ರಕಾಶ್, ಶಿಕ್ಷಕ ವೃತ್ತಿಯ ಕುರಿತು ವಿವರಿಸಿ, ವ್ಯಕ್ತಿಯು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದ ಮೌಲ್ಯಗಳು ಮತ್ತು ಸಾಧನೆಯ ಪಥದತ್ತ ಸಾಗಲು ಇರಬೇಕಾದ ಮುಖ್ಯ ಅಂಶಗಳ ಕುರಿತು ತಿಳಿಸಿದರು.
ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಮುಷ್ತಾಕ್ ಅಹಮ್ಮದ್ ಭಾವಿಕಟ್ಟಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಸಿದ್ದಿಕ್ ಇಸ್ಮಾಯಿಲ್, ಅಫ್ತಾಬ್ ಖಮ್ರಿ, ಇಷಾಕ್ ಶಾಬಂದ್ರಿ ಉಪಸ್ಥಿತರಿದ್ದರು.
ಶಬನಮ್ ಮತ್ತು ಸಂಗಡಿಗರು ಕಿರಾಅತ್,ಕಾಸಿಮ್ ನಾಥ್ ಪಠಿಸಿದರು. ವಿನಯಾ ಸಂಗಡಿಗರು ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ನೂರಾ ಪರಿಚಯಿಸಿದರು.
ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಝಕ್ರಿಯಾ ಝರ್ಜರಿ ವರದಿ ವಾಚಿಸಿದರು. ಐದು ವರ್ಷಗಳಿಂದ ಶೇ.ನೂರು ಫಲಿತಾಂಶ ಬರಲು ಶ್ರಮಿಸುತ್ತಿರುವ ಪ್ರಾಂಶುಪಾಲ ಡಾ ಝಕ್ರಿಯಾ, ಪ್ರೊ.ಹಸನ್ ಬಾಗೆವಾಡಿ, ಪ್ರೊ.ಶ್ವೇತಾಕುಮಾರಿ, ಪ್ರೊ.ರೇಖಾ ಅವರನ್ನು ಡಿಡಿಪಿಐ ಪಿ.ಕೆ ಪ್ರಕಾಶ ಅವರು ಸನ್ಮಾನಿಸಿ, ಬಹುಮಾನ ನೀಡಿದರು.
ಕಾರ್ಯಕ್ರಮದಲ್ಲಿ ಉತ್ತಮ ಬೋಧನಾ, ಶಿಸ್ತಿನ ವಿದ್ಯಾರ್ಥಿ, ಉತ್ತಮ ನಿರೂಪಣೆ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು. ವಿವಿಧ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ದೈಹಿಕ ಶಿಕ್ಷಕ ಮೋಹನ ಮೇಸ್ತ, ಪ್ರೊ.ಶ್ವೇತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.







