ಪ್ರವಾದಿ ಸಂದೇಶ ಎಲ್ಲಾ ಧರ್ಮದವರಿಗೂ ಅನುಕರಣೀಯ: ಆಲ್ಬನ್ ರೊಡ್ರಿಗಸ್
ಸೀರತ್ ಸೌಹಾರ್ದ ಕೂಟ

ಕಾಪು, ಡಿ. 17: ಪ್ರವಾದಿ ಮಹಮ್ಮದ್‌ರ ಸಂದೇಶ, ತತ್ವ, ಪ್ರತಿಪಾದನೆ ಮತ್ತು ಆದರ್ಶಗಳು ಎಲ್ಲಾ ಧರ್ಮದವರಿಗೂ ಅನುಕರಣೀಯವಾಗಿದೆ. ಅದನ್ನು ಪ್ರತಿಯೋರ್ವರು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದು ಅವಶ್ಯಕತೆತಯಾಗಿದೆ ಎಂದು ದಂಡ ತೀರ್ಥ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಅಭಿಪ್ರಾಯಪಟ್ಟರು.
ಅವರು ರವಿವಾರ ಜಮಾಅತೆ ಇಸ್ಲಾಮೀ ಹಿಂದ್ ಕಾಪು ಇವರ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ ಹುಟ್ಟಿದ ತಿಂಗಳ ಪ್ರಯುಕ್ತ ಕಾಪು ಸ್ಟೇಟ್ ಬ್ಯಾಂಕ್‌ನ ಬಳಿಯ ಹೀರಾ ಕಾಂಪ್ಲೆಕ್ಸ್‌ನಲ್ಲಿ ಜರಗಿದ ಸೀರತ್ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜಸೇವಕ ಸುರೇಶ್ ಪಿ. ಶೆಟ್ಟಿ ಗುರ್ಮೆ ಮಾತನಾಡಿ, ಪರಸ್ಪರ ಅಪನಂಬಿಕೆ ದೂರವಾಗಿ ಸಮಾಜದಲ್ಲಿ ಸರ್ವ ಧರ್ಮೀಯರೂ ಒಂದಾಗಿ ಬಾಳುವುದು ಇಂದಿನ ಅವಶ್ಯಕತೆ ಮತ್ತು ಅನಿವಾರ್ಯತೆಯಾಗಿದೆ. ಸೌಹಾರ್ದ ಕಾರ್ಯಕ್ರಮಗಳ ಮೂಲಕವಾಗಿ ಸಮಾಜವನ್ನು ಕಟ್ಟುವ ಮತ್ತು ಪರಸ್ಪರ ಮನಸ್ಸುಗಳನ್ನು ಒಂದಾಗಿಸುವ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಜಮಾಅತೆ ಇಸ್ಲಾಮೀ ಹಿಂದ್‌ನ ಈ ಕಾರ್ಯಕ್ರಮ ಅಭಿನಂದನಾರ್ಹವಾಗಿದೆ ಎಂದರು.
ಮಲ್ಪೆ ಮಸ್ಜಿದ್‌ನ ಧರ್ಮಗುರು ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಮಾತನಾಡಿ, ಮನುಷ್ಯ, ಜಾತಿ ಮತ್ತು ಧರ್ಮವನ್ನು ಬಲವಂತವಾಗಿ ಬದಲಾಯಿಸುವುದಕ್ಕೆ ಯಾವುದೇ ಧರ್ಮದಲ್ಲೂ ಅವಕಾಶವಿಲ್ಲ. ಬಲವಂತದ ಮತಾಂತರಕ್ಕೆ ಇಸ್ಲಾಂನಲ್ಲಿ ಯಾವತ್ತೂ ಕೂಡಾ ಬೆಂಬಲವಿಲ್ಲ. ಇಸ್ಲಾಂ ಮತ್ತು ಪ್ರವಾದಿಯ ಬಗ್ಗೆ ಇತರರಲ್ಲಿ ಇರುವ ಸಂಶಯ ಪ್ರವೃತ್ತಿಯನ್ನು ನಿವಾರಣೆಗೊಳಿಸುವ ಕಾರ್ಯ ನಮ್ಮಿಂದ ನಡೆಯಬೇಕಿದೆ ಎಂದರು.
ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಸಲಹಾ ಸಮಿತಿ ಸದಸ್ಯ ಅಕ್ಬರ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿಯ ಉಚ್ಚಿಲ ಸಮಿತಿಯ ಅಧ್ಯಕ್ಷ ದಿನಕರ ಉಚ್ಚಿಲ, ಗಣ್ಯರಾದ ಶಭೀ ಅಹ್ಮದ್ ಕಾಝಿ., ಕಾಪು ಪುರಸಭೆ ಉಪಾಧ್ಯಕ್ಷ ಕೆ. ಎಚ್. ಉಸ್ಮಾನ್, ಅರುಣ್ ಶೆಟ್ಟಿ ಪಾದೂರು, ಮೋಹಿನಿ ಶೆಟ್ಟಿ, ಶಾಬು ಸಾಹೇಬ್ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜೇಸಿಐನ ವಲಯಾಧ್ಯಕ್ಷರಾಗಿ ಆಯ್ಕೆಯಾದ ಪತ್ರಕರ್ತ ರಾಕೇಶ್ ಕುಂಜೂರು ಅವರನ್ನು ಸಮ್ಮಾನಿಸಲಾಯಿತು. ಜಮಾಅತೆ ಇಸ್ಲಾಮಿ ಹಿಂದ್‌ನ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಸ್ವಾಗತಿಸಿದರು. ಎಸ್.ಐ.ಒ. ಎಸೋಸಿಯೇಟ್ ಆಲೆ ರಸೂಲ್ ಕರ್‌ಆನ್ ಪಠಿಸಿದರು. ಜಮಾತೆ ಇಸ್ಲಾಮಿ ಹಿಂದ್‌ನ ಸದಸ್ಯ ನಿಸಾರ್ ಅಹಮದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







