ಟಾಲ್‌ಸ್ಟಾಲ್ ಕಾದಂಬರಿಯಲ್ಲಿ ಮನುಷ್ಯನ ಭಾವನೆಗಳಿವೆ: ಪ್ರೊ.ಓ.ಎಲ್.ನಾಗಭೂಷಣಸ್ವಾಮಿ
ಬೆಂಗಳೂರು, ಡಿ.17: ಮನಸ್ಸಿನ ಭಾವನೆಗಳನ್ನು ಅಕ್ಷರ ರೂಪದಲ್ಲಿ ಪ್ರಚುರಪಡಿಸುವ ಲಿಯೋ ಟಾಲ್ ಸ್ಟಾಯ್ ಅವರ ಕಾದಂಬರಿಯಲ್ಲಿ ಸೌಂದರ್ಯ, ಸತ್ಯ, ಸಾವು ಹಾಗೂ ಪ್ರೇಮವನ್ನು ಕಾಣಬಹುದಾಗಿದೆ ಎಂದು ಅನುವಾದಕ, ಲೇಖಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಹೇಳಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಆಕೃತಿ ಪುಸ್ತಕ ಆಯೋಜಿಸಿದ್ದ ಪತ್ರಕರ್ತ ಬಿ.ಎಸ್.ಜಯಪ್ರಕಾಶ್ ನಾರಾಯಣ ಅವರು ರಚಿಸಿರುವ ‘ಕಾಲವಲ್ಲಿರಲಿಲ್ಲ, ದೇಶವಲ್ಲಿರಲಿಲ್ಲ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯನಲ್ಲಿ ಎಲ್ಲ ಗುಣಗಳು ಇವೆ. ಹಾಗೆಯೇ ಅನುಮಾನಗಳನ್ನು ತಾನು ಸೇರಿ ಹಲವರಿಗೆ ಬಗೆಹರಿಸಿಕೊಳ್ಳಲಾಗುತ್ತಿಲ್ಲ ಎಂದು ಹೇಳುವ ಲಿಯೊ ಟಾಲ್ ಸ್ಟಾಯ್ ಅವರು ತಮ್ಮ ಕಾದಂಬರಿಯಲ್ಲಿ ಮನುಷ್ಯ ಸರಳವಾಗಿ ಬದುಕುವ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.
ವಾರ್ ಆಂಡ್ ಪೀಸ್, ಆನ್ನಾ ಕರೆನೀನ ಸೇರಿ ನೂರಾರು ಕಾದಂಬರಿಗಳನ್ನು ರಚಿಸಿರುವ ಟಾಲ್‌ಸ್ಟಾಯ್ ಅವರು ಸಾವಿನ ಕಡೆಯ ಕ್ಷಣದವರೆಗೂ ಇನ್ನಷ್ಟು ಕಾದಂಬರಿಗಳನ್ನು ರಚಿಸುವ ಆಸೆಯನ್ನಿಟ್ಟುಕೊಂಡಿದ್ದರು ಎಂದು ತಿಳಿಸಿದರು.
ಮ್ಯಾಕ್ಸಿಂ ಗಾರ್ಕಿ ಅವರು ಮನುಷ್ಯನಲ್ಲಿ ರಾಕ್ಷಸ ಮತ್ತು ದೇವರ ಗುಣಗಳು ಇವೆ ಎಂದು ಹೇಳುವುದರ ಜೊತೆಗೆ ಭಾಷೆಯನ್ನು ಬಳಸಿಕೊಂಡು ದೇಶವನ್ನೆ ಸೃಷ್ಠಿಸಿದ್ದಾರೆ ಎಂದು ಹೇಳಿದರು.
ಅನುವಾದಿತ ಕೃತಿ ಕುರಿತು ಮಾತನಾಡಿದ ಚಿಂತಕ ಕೆ.ಸಿ.ರಘು ಅವರು, ನಾವೇಲ್ಲ ರಷ್ಯನ್ನ ಕಾದಂಬರಿಗಳನ್ನು ಓದಿ ಬೆಳೆದಿದ್ದು, ಈ ಕಾದಂಬರಿಗಳು ಸಮಾಜದ ಪರಿವರ್ತನೆಗಳಿಗೆ ಕಾರಣವಾಗಿವೆ ಎಂದು ಹೇಳಿದರು.
ಪತ್ರಕರ್ತ, ಅನುವಾದಕ ಬಿ.ಎಸ್.ಜಯಪ್ರಕಾಶ್ ನಾರಾಯಣ ಮಾತನಾಡಿ, ಗುಜರಾತಿ, ತಮಿಳು ಸೇರಿ ಇನ್ನಿತರ ಭಾಷೆಗಳ ಕೃತಿಗಳು ಕನ್ನಡಕ್ಕೆ ಅನುವಾದಬೇಕಾಗಿದ್ದು, ಇದರಿಂದ, ಕನ್ನಡಕ್ಕೆ ಅಪಾರ ಜ್ಞಾನ ಸಂಪತ್ತು ಹರಿದು ಬರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹ ಕಾರ್ಯದರ್ಶಿ ಮಂಗ್ಳೂರ ವಿಜಯ ಸೇರಿ ಮತ್ತಿತರರು ಉಪಸ್ಥಿತರಿದ್ದರು.







