ಪುಸ್ತಕ ಪ್ರಾಧಿಕಾರದ 2016ರ ಅತ್ಯುತ್ತಮ ಪ್ರಕಾಶನ-‘ಪುಸಕ್ತ ಸೊಗಸು’ ಪ್ರಶಸ್ತಿ ಪ್ರಕಟ
ಬೆಂಗಳೂರು, ಡಿ.17: ಕನ್ನಡ ಪುಸ್ತಕ ಪ್ರಾಧಿಕಾರಿದ 2016ನೆ ಸಾಲಿನ ಪುಸ್ತಕ ಸೊಗಸು ಬಹುಮಾನ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಜ.16ರಂದು ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
2016ನೆ ಸಾಲಿನ ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಗೆ ವಸಂತ ಪ್ರಕಾಶನ ಬೆಂಗಳೂರು, ವಿಚಾರವಾದಿ ಡಾ.ಎಂ.ಎಂ.ಕಲಬುರ್ಗಿ ‘ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಡಾ. ಸಂಗಮೇಶ ಸವದತ್ತಿಮಠ-ಧಾರವಾಡ, ‘ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಡಾ.ಅರ್ಜುನ ಯಲ್ಲಪ್ಪಗೊಳಸಂಗಿ ಹಾಗೂ ‘ಡಾ.ಅನುಪಮಾ ನಿರಂಜನ ವೈದ್ಯ-ವಿಜ್ಞಾನ ಸಾಹಿತ್ಯ ಪ್ರಶಸ್ತಿ’ಗೆ ಡಾ.ಪಿ.ಎಸ್. ಶಂಕರ್ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಕ್ರಮವಾಗಿ 1ಲಕ್ಷ ರೂ., 75 ಸಾವಿರ ರೂ., 50 ಸಾವಿರ ರೂ. ಹಾಗೂ 25 ಸಾವಿರ ರೂ.ನಗದು ಒಳಗೊಂಡಿದೆ.
ಪುಸ್ತಕ ಸೊಗಸು-ಪ್ರಥಮ:ಎಚ್.ಬಿ.ಎಲ್.ರಾವ್ ಅವರ ‘ಅಣಿ ಅರದಲ ಸಿರಿ ಸಿಂಗಾರ ’ಕೃತಿ, ಸಾಹಿತ್ಯ ಬಳಗ ನವಿಮುಂಬೈ-25 ಸಾವಿರ ರೂ. ನಗದು ಪ್ರಶಸ್ತಿ ಪ್ರಕಟಿಸಲಾಗಿದೆ.
ದ್ವಿತೀಯ: ಮಾನಸಾ ಅವರ ‘ಕನಕ ಮಹಾ ಸಂಪುಟ’ಕೃತಿ, ತನು ಮನು ಪ್ರಕಾಶನ ಮೈಸೂರು, 20 ಸಾವಿರ ರೂ.ನಗದು. ಡಾ ಶಿವಾನಂದ ಎಂ.ಜಾಮದಾರ ಅವರ ‘ತಾರತಮ್ಯ’ ಕೃತಿ, ಮನೋಹರ ಗ್ರಂಥ ಮಾಲಾ-ಧಾರವಾಡ ಇವರಿಗೆ 15 ಸಾವಿರ ರೂ.ನಗದು ಒಳಗೊಂಡ ಪ್ರಶಸ್ತಿಗೆ ತೃತೀಯ ಬಹುಮಾನ ಪ್ರಕಟಿಸಲಾಗಿದೆ.
ಮಕ್ಕಳ ಪುಸ್ತಕ ಸೊಗಸು: ಬಣ್ಣದ ಚಿಟ್ಟೆ-ಚಿಕ್ಕಬಳ್ಳಾಪುರದ ಚಂದು ಪ್ರಕಾಶನಕ್ಕೆ 10 ಸಾವಿರ ರೂ.ನಗದು, ಮುಖಪುಟ ಚಿತ್ರ ವಿನ್ಯಾಸಕ್ಕೆ ರಾಜೇಂದ್ರ ಪ್ರಸಾದ್ ಅವರ ‘ಲಾವೋನ ಕನಸು’ ಕೃತಿಗೆ 10 ಸಾವಿರ ರೂ., ಕಲಾವಿದರಾದ ಕಿರಣ್ ಮಾಡಾಲು, ಸೌಮ್ಯಾ ಕಲ್ಯಾಣಕರ್ ಆಯ್ಕೆಯಾಗಿದ್ದಾರೆ.
ಮುಖಪುಟ ಚಿತ್ರಕಲೆಗೆ ಅಂಕಣಕಾರ ಬಿ.ಶ್ರೀಪಾದ್ ಭಟ್ ಅವರ ‘ಬಿಸಿಲು ಬಯಲು ನೆಳಲು’ ಕೃತಿಯ ಕಲಾವಿದರಾಗಿ ಸೃಜನ್ ಆಯ್ಕೆಗೊಂಡಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.







