ಪರಪ್ಪನ ಅಗ್ರಹಾರ ಅವ್ಯವಹಾರ ಆರೋಪ ಪ್ರಕರಣ : ಆರ್‌ಟಿಐ ಅರ್ಜಿ ಸಲ್ಲಿಸಿದ ಡಿ.ರೂಪಾ

ಬೆಂಗಳೂರು, ಡಿ.17: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಅವ್ಯವಹಾರ ಆರೋಪ ಪ್ರಕರಣ ಸಂಬಂಧ ಗೃಹ ಇಲಾಖೆ ಮತ್ತು ಎಸಿಬಿ ಸಂಸ್ಥೆಗೆ ಮಾಹಿತಿ ನೀಡುವಂತೆ ಆರ್‌ಟಿಐ ಅರ್ಜಿ ಸಲ್ಲಿಸಿರುವುದಾಗಿ ಡಿಐಜಿ ಡಿ.ರೂಪಾ ಮೌದ್ಗಿಲ್ ತಿಳಿಸಿದ್ದಾರೆ.
ರವಿವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ವಿನಯ್ ಕುಮಾರ್ ವರದಿಯಲ್ಲಿರುವ ಅಂಶ, ನಿವೃತ್ತ ಡಿಜಿಪಿ ಸತ್ಯನಾರಾಯಣ್‌ರಾವ್ ಲಂಚ ಪಡೆದಿರುವ ಬಗ್ಗೆ ಗೃಹ ಇಲಾಖೆ ಮತ್ತು ಎಸಿಬಿ ಸಂಸ್ಥೆಗೆ ಮಾಹಿತಿ ನೀಡುವಂತೆ ಶನಿವಾರ(ಡಿ.16)ರಎರಡು ಆರ್‌ಟಿಐ ಅಜಿರ್ ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಗೃಹ ಇಲಾಖೆ ಕೆಳಗೆ ಕೆಲಸ ನಿರ್ವಹಿಸುತ್ತಿರುವ ಅಂಡರ್ ಸೆಕ್ಯೂರಿಟಿ ಪ್ರಿಜನ್ ಇವರಿಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದೇನೆ. ಡಿಜಿಪಿಯಾಗಿದ್ದ ಸತ್ಯನಾರಾಯಣ್ ರಾವ್ ಅವರು 2 ಕೋಟಿ ರೂ. ಲಂಚ ಪಡೆದಿರುವುದು, ಎಐಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ನೀಡಲಾದ ವಿಶೇಷ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವಂತೆ ಎಸಿಬಿ ಸಂಸ್ಥೆಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದೇನೆ.ಪರಪ್ಪನ ಅಗ್ರಹಾರದಲ್ಲಿ ಅವ್ಯವಹಾರ ಪ್ರಕರಣ ಸಂಬಂಧ ಈಗಾಗಲೇ ಎರಡು ವರದಿಯನ್ನು ನೀಡಿದ್ದೆ. ಇದರಲ್ಲಿ ಹಿಂದೆ ಡಿಜಿಪಿಯಾಗಿದ್ದ ಸತ್ಯನಾರಾಯಣ್ ರಾವ್ ಅವರು 2 ಕೋಟಿ ರೂ. ಲಂಚ ಪಡೆದಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಉಲ್ಲೇಖಸಿದ್ದೆ. ಮತ್ತೊಂದು ವರದಿಯಲ್ಲಿ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ನೀಡಿರುವುದು ಭ್ರಷ್ಟಾಚಾರ ವಿರೋಧ ಕಾಯ್ದೆಯಡಿ 13,1 (ಸಿ) ಸೆಕ್ಷನ್‌ನಲ್ಲಿ ತಪ್ಪು ಎಂದು ಬರೆದಿದ್ದೆ. ಆದರೆ, ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ, ಕನಿಷ್ಠ ಪಕ್ಷ ಅಧಿಕಾರಿಗಳು ಜೈಲಿನ ಒಳ ಹೋಗಿ ಈ ಬಗ್ಗೆ ಗಮನಿಸಲಿಲ್ಲ ಎಂದು ಆರೋಪಿಸಿದರು.
ಸುಪ್ರೀಂಕೊರ್ಟ್ ತೀರ್ಪಿನ ಪ್ರಕಾರ, ಇಂತಹ ಪ್ರಕರಣಗಳಲ್ಲಿ 45 ದಿನದೊಳಗೆ ಎಫ್‌ಐಆರ್ ದಾಖಲಿಸಬೇಕು. ಇಲ್ಲವಾದರೆ ಪ್ರಕರಣವನ್ನು ಮುಕ್ತಾಯಗೊಳಿಸಿ, ದೂರುದಾರರಿಗೆ ಮುಕ್ತಾಯಗೊಳಿಸಿರುವ ಬಗ್ಗೆ ಮಾಹಿತಿ ನೀಡಬೇಕು ಎಂಬ ನಿಯಮವಿದೆ. ಆದರೆ, ಜೈಲಿನ ಅವ್ಯವಹಾರ ಪ್ರಕರಣದಲ್ಲಿ ಈ ರೀತಿ ಮಾಡದೆ, ಕಾನೂನು ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬರುತ್ತದೆ ರೂಪಾ ಹೇಳಿದರು.







