ಮಹಿಳೆಯರಿಗೆ ಸ್ವಾವಲಂಬನೆ ಕಲ್ಪಿಸಿದ್ದು ಇಂದಿರಾಗಾಂಧಿ : ಡಾ.ಜಿ.ಪರಮೇಶ್ವರ್

ಕೊರಟಗೆರೆ/ತುಮಕೂರು.ಡಿ17:ಭಾರತದಲ್ಲಿ ಮಹಿಳೆಯರಿಗೆ ಸ್ವಾವಲಂಬನೆಯನ್ನು ಕಲ್ಪಿಸಿ ಕೊಟ್ಟ ಕೀರ್ತಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಶೇ.50 ರಷ್ಟು ಮೀಸಲಾತಿ ನೀಡಿದ ಹೆಗ್ಗಳಿಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿರವರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕೊರಟಗೆರೆ ಪಟ್ಟಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಹಿಳಾ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಯುವಕಾಂಗ್ರೆಸ್, ವಿಧ್ಯಾರ್ಥಿ ಕಾಂಗ್ರೆಸ್ ಏರ್ಪಡಿಸಿದ್ದ ಗ್ರಾಮೀಣ ಮಹಿಳೆಯರಿಗಾಗಿ ಮಹಿಳಾ ಸಬಲೀಕರಣ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ದೇಶದಲ್ಲಿ ಮಹಿಳೆಯರ ಮೀಸಲಾತಿಯನ್ನು ಹೋರಾಟದ ಮುಖಾಂತರ ತಂದು ಕೊಟ್ಟ ಕೀರ್ತಿ ಕಾಂಗ್ರೆಸ್ ಪಕ್ಷದಾಗಿದೆ, ಕೊರಟಗೆರೆ ಮಹಿಳಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿರುವ ಈ ಬೃಹತ್ ಸಮಾವೇಶ ಕೇವಲ ರಾಜಕೀಯಕ್ಕಾಗಿ ಅಲ್ಲ, ಮಹಿಳೆಯರ ಸ್ವಾವಲಂಬನೆ ಬದುಕು ಹಾಗೂ ಈಗಿನ ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿರೋಧಿಗಳ ಟೀಕೆಯಂತೆ ಸರಕಾರದ ಯಾವುದೇ ಅಧಿಕಾರಿಗಳನ್ನು ಬಳಸಿಕೊಂಡಿಲ್ಲ, ಅದರ ಅಗತ್ಯತೆಯೂ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ರಾಜಕೀಯವು ಬೃಹದಾಕಾರವಾಗಿ ಬೆಳೆಯುತಿದೆ, ಇಂತಹ ಸ್ಥಿತಿಯಲ್ಲಿ ಹೊರದೇಶದಿಂದ ಈ ದೇಶದ ಸೊಸೆಯಾಗಿ ಭಾರತಕ್ಕೆ ಬಂದು ಅತ್ತೆ ಮತ್ತು ಗಂಡನನ್ನು ಕಳೆದುಕೂಂಡು ಆಂತಂಕದ ಸ್ಥಿತಿಯಲ್ಲಿದ್ದರೂ ಅಂದು ಸಂಕಷ್ಟದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರೀಯ ಅಧ್ಯಕ್ಷರಾಗಿ 19 ವರ್ಷಗಳ ಕಾಲ ಸೋಲು ಗೆಲುವಿನೋಂದಿಗೆ ಪಕ್ಷವನ್ನು ಮುನ್ನೆಡೆಸಿದ ಕೀರ್ತಿ ಸೋನಿಯಾಗಾಂಧಿ ಅವರಿಗೆ ಸಲ್ಲುತ್ತದೆ.ಅವರು ನಮ್ಮಗೆಲ್ಲರಿಗೂ ಮಾರ್ಗದರ್ಶದ ನೀಡಿದಂತೆ ದೇಶದಲ್ಲಿ ಬಡವರಿಗೆ, ತುಳಿತಕ್ಕೆ ಒಳಗಾದವರಿಗೆ ಹಾಗೂ ರೈತರಿಗೆ ನ್ಯಾಯ ಒದಗಿಸುವ ಹೋರಾಟವನ್ನು ಮಾಡಿಕೊಂಡು ಬರುತ್ತಿದ್ದೇವೆ.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಡವರಿಗಾಗಿ ನೀಡಿರುವ ಹಲವಾರು ಕಾರ್ಯಕ್ರಮಗಳನ್ನು ಬೇರೆ ಪಕ್ಷಗಳು ನೀಡಲು ಸಾಧ್ಯವಿಲ್ಲ, ನಾವು 2013 ರ ವಿಧಾನ ಸಭಾ ಚುನಾವಣೆಯಲ್ಲಿ 9 ವರ್ಷಗಳ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದೆವು.ಆದರೆ ಕೊರಟಗೆರೆಯಲ್ಲಿ ಆದಂತಹ ಸೋಲನ್ನು ಮೇಟ್ಟಿನಿಂತು 2018 ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಕೊರಟಗೆರೆ ಕ್ಷೇತ್ರದಲ್ಲಿ ಗೆಲ್ಲಿಸುವ ಮೂಲಕ ನನಗೆ ಶಕ್ತಿಯನ್ನು ನೀಡಬೇಕು ಎಂದರು.
ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ,ಈಗಾಗಲೆ ರೈತರಿಗೆ ತುಮಕೂರು ಸಹಕಾರ ಬ್ಯಾಂಕ್‍ಗಳಿಂದ ನೀಡಿರುವ ಸಾಲವನ್ನು ಮನ್ನಾ ಮಾಡಲಾಗಿದೆ, ಇದರೊಂದಿಗೆ ಮತ್ತೆ 1 ಲಕ್ಷ ರೂ.ಗಳವರಿಗೂ ಸಾಲ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಕೊರಟಗೆರೆಯಲ್ಲಿ ಬೃಹತ್ ಸಾಲ ಮೇಳವನ್ನು ಆಯೋಜಿಸಿ ಪಹಣಿ ಇರುವ ರೈತರಿಗೆ 1 ಲಕ್ಷ ರೂಗಳ ಸಾಲ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಯಾವುದೇ ಷರತ್ತು ಇಲ್ಲದೆ 3 ಲಕ್ಷ ರೂಗಳ ವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು. ನೀವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಯೋಜನೆಗಳನ್ನು ನೀಡಲಾಗುವುದು.ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ರವರನ್ನು ಮಧುಗಿರಿ ಕ್ಷೇತ್ರದಿಂದ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಜಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಚಿವೆ ಉಮಾಶ್ರೀ, ಸಂಸದ ಮುದ್ದಹನುಮೇಗೌಡ, ವಿಧಾನ ಪರಿಷತ್ ಸದಸ್ಯರುಗಳಾದ ಮೋಟಮ್ಮ,ರಾಣಿಸತೀಶ್, ಜಯಮಾಲ,ಜಯಮ್ಮ,ಮುಖ್ಯಮಂತ್ರಿ ಚಂದ್ರು, ಜಿ.ಪಂ.ಸದಸ್ಯೆ ಶಾಂತಲರಾಜಣ್ಣ, ಕೆಪಿಸಿಸಿ ಕಾರ್ಯದರ್ಶಿ ನಾಗಲಕ್ಷ್ಮಿ ಚೌದ್ರಿ, ಜಿಲ್ಲಾ ಮಹಿಳಾ ಅಧ್ಯಕ್ಷ ಇಂದಿರಾದೇನಾನಾಯ್ಕ್, ಪ್ರಧಾನ ಕಾರ್ಯದರ್ಶಿ ಕವಿತಾ, ಮಂಜುಳಾ ಆರಾಧ್ಯ, ತಾಲೂಕು ಅಧ್ಯಕ್ಷ ಜಯಮ್ಮ, ತಾಪಂ. ಉಪಾಧ್ಯಕ್ಷೆ ನರಸಮ್ಮ, ಸದಸ್ಯ ಸುಮಾ, ಜ್ಯೋತಿ, ಪ.ಪಂ.ಅಧ್ಯಕ್ಷೆ ಬರ್ಜಿಸ್‍ಮುಕ್ತಿಯಾರ್, ಗ್ರಾ.ಪಂ.ಅಧ್ಯಕ್ಷರುಗಳಾಗ ಮಂಜುಳಾ, ಲಕ್ಷ್ಮೀ, ಮಂಜುಳಾ ಪ್ರಸಾದ್, ಸುಮೀತ್ರಾ ಸೇರಿದಂತೆ ಇನ್ನಿತರರು ಹಾಜರಿದ್ದರು.







