ಕಾಂಗ್ರೆಸ್ ಪಕ್ಷ ಮಹಿಳೆಯರ ಸಬಲೀಕರಣಕ್ಕೆ ದುಡಿಯುತ್ತಿದೆ : ಉಮಾಶ್ರೀ

ಕೊರಟಗೆರೆ/ತುಮಕೂರು,ಡಿ17:ರಾಜ್ಯದಲ್ಲಿ ಮಹಿಳೆಯರ ಅಭಿವೃಧ್ದಿಗಾಗಿ ಸ್ತ್ರೀಶಕ್ತಿ ಸಂಘಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಬಲೆಯರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ, ಮುಂದೆಯೂ ಮಹಿಳೆಯರ ಪ್ರಗತಿಗೆ ಯೋಜನೆಗಳನ್ನು ರೂಪಿಸುವುದು ಸಹ ಕಾಂಗ್ರೆಸ್ ಪಕ್ಷವೇ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಆಬಿವೃಧ್ದಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಕೊರಟಗೆರೆ ಪಟ್ಟಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಹಿಳಾ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಯುವಕಾಂಗ್ರೆಸ್, ವಿಧ್ಯಾರ್ಥಿ ಕಾಂಗ್ರೆಸ್ ಏರ್ಪಡಿಸಿದ್ದ ಗ್ರಾಮೀಣ ಮಹಿಳೆಯರಿಗಾಗಿ ಮಹಿಳಾ ಸಬಲೀಕರಣ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಮಾಜಿ ಪ್ರಧಾನ ಮಂತ್ರಿ ರಾಜೀವ್‍ಗಾಂಧಿರವರು ಪ್ರಧಾನಮಂತ್ರಿಗಳಾಗಿದ್ದ ಸಮಯದಲ್ಲಿ ಮಹಿಳೆಯರು ಶೈಕ್ಷಣಿಕವಾಗಿ,ಆರ್ಥಿಕವಾಗಿ, ಸಮಾಜಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಿದ್ದರು.
ಸೋನಿಯಾಗಾಂಧಿ ಎಐಸಿಸಿ ಅಧ್ಯಕ್ಷರಾದ ನಂತರ ಮಹಿಳೆಯರು ಆರ್ಥಿಕವಾಗಿ ಸಂಘಟಿಕರಾಗಲು ಸ್ತ್ರೀ ಶಕ್ತಿ ಸಂಘಗಳನ್ನು ಪ್ರಾರಂಬಿಸಿ ಪ್ರಥಮ ಬಾರಿಗೆ ಎಲ್ಲಾ ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 5 ಸಾವಿರ ರೂ ಗಳ ಸುತ್ತುನಿಧಿ ನೀಡಲಾಯಿತು. ಆದರೆ ನಂತರ ಅಧಿಕಾರಕ್ಕೆ ಬಂದ ಜೆಡಿಎಸ್ ಮತ್ತು ಬಿಜೆಪಿ ಸರಕಾಗಳ ಮುಖ್ಯಮಂತ್ರಿಗಳು ಯಾವ ಸವಲತ್ತು ನೀಡಲಿಲ್ಲ. 2013 ರಲ್ಲಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇ ಸ್ತ್ರೀ ಶಕ್ತಿ ಸಂಘಗಳ ಸುತ್ತು ನಿಧಿಯನ್ನು 25 ಸಾವಿರ ರೂ.ಗಳಿಗೆ ಹೆಚ್ಚಿಸಿದ್ದು ಹಾಗೂ ಜಿಲ್ಲಾ ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟಗಳ ರಚನೆ ಮಾಡಿದ್ದು ಹಾಗೂ ಮುಂದಿನ ದಿನಗಳಲ್ಲಿ ರಾಜ್ಯ ಸ್ತ್ರೀಶಕ್ತಿ ಒಕ್ಕೂಟ ರಚನೆ ಮಾಡಲಾಗುವುದು ಎಂದು ಸಚಿವೆ ಉಮಾಶ್ರೀ ನುಡಿದರು.
ಕಾಂಗ್ರೆಸ್ ಪಕ್ಷ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಿ ಅದರ ಮೂಲಕ ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ನೀಡುತ್ತಿದ್ದು,ಅದರೊಂದಿಗೆ 45 ವರ್ಷ ವಿವಾಹವಾಗದೆ ಉಳಿದ ಯುವತಿಯರಿಗೆ ಮಾಸಾಶನ, ಮಂಗಳ ಮುಖಿಯರಿಗೆ ಸಮಾಜದಲ್ಲಿ ಜೀವನ ನಡೆಸಲು ಎಲ್ಲಾ ಅನೇಕ ಯೋಜನೆಗಳನ್ನು ಕಾರ್ಯ ರೂಪಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯನ್ನು ರದ್ದು ಮಾಡುವುದಾಗಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಹೇಳಿದ್ದಾರೆ. ಬಡವರ ಅನ್ನಭಾಗ್ಯವನ್ನು ರದ್ದು ಮಾಡುವ ಮುಖಾಂತರ ಬಡವರು ಹಸಿದ ಹೊಟ್ಟೆಯಲ್ಲಿ ಮಲಗುವಂತೆ ಮಾಡಲು ಹೊರಟಿದ್ದಾರೆ. ಬಡವರ ಏಳಿಗೆಗೆ ಮಹಿಳೆಯರ ಸಬಲೀಕರಣ, ಅಭಿವೃದ್ದಿ ಕಾಂಗ್ರೆಸ ಪಕ್ಷದಿಂದ ಮಾತ್ರ ಸಾಧ್ಯ. ಅದ್ದರಿಂದ 2018 ರ ಚುನಾವಣೆಯಲ್ಲಿ ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಕೋರಿದರು.
ಜಿಲ್ಲಾ ಉಸ್ತುವರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಕಾಂಗ್ರೆಸ್ ಪಕ್ಷದ ನೇತೃತ್ವದ ಸಿದ್ದರಾಮಯ್ಯ ಸರಕಾರವು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ 2013 ರಲ್ಲಿ ಕಾಂಗ್ರೆಸ್ ಪಕ್ಷದ ಪ್ರನಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ, ಕೊರಟಗೆರೆಯಲ್ಲಿ ಮಹಿಳೆಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಸೇರಿರುವುದು ಪಕ್ಷಕ್ಕೆ ಮತ್ತಷ್ಟು ಬಲ ನೀಡಿದೆ ಎಂದರು.
ಮಾಜಿ ಸಚಿವೆ ಹಾಗೂ ವಿಧಾನ ಪರಿಷತ್ ಸದಸ್ಯ ಮೋಟಮ್ಮ ಮಾತನಾಡಿ ಎಸ್.ಎಂ ಕೃಷ್ಣ ಸರ್ಕಾರದಲ್ಲಿ ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮಂತ್ರಿಯಾಗಿದ್ದ ಕಾಲದಲ್ಲಿ ಈಡೀ ದೇಶದಲ್ಲೆ ಪ್ರಥಮವಾಗಿ ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿದ್ದ ಹೆಗ್ಗೆಳಿಕೆ ಕಾಂಗ್ರೆಸ್ ಪಕ್ಷದಾಗಿದೆ.ಈ ಸಂಘಗಳು ಬೃಹದಾಕಾರವಾಗಿ ಬೆಳೆದಿದೆ ಇದರಿಂದ ಮಹಿಳೆಯರು ಸ್ವಾವಲಂಬನೆಯಾಗಿ ಆರ್ಥಿಕವಾಗಿ ಸದೃಡರಾಗಿ ದೇಶದ ಇರತ ರಾಜ್ಯಗಳು ನಮ್ಮನ್ನು ಅನುಕರಣೆ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷದಾಗಿದ್ದು ಇದನ್ನು 8 ವರ್ಷಗಳಿಂದ ಮುನ್ನೆಡೆಸುತಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಮ್ಮೆಲ್ಲರಿಗೂ ಮಾರ್ಗದರ್ಶಕರು ಎಂದರು.
ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಶಾಸಕ ಕೆ.ಎನ್.ರಾಜಣ್ಣ, ಸಂಸದ ಮುದ್ದಹನುಮೇಗೌಡ, ವಿಧಾನ ಪರಿಷತ್ ಸದಸ್ಯರುಗಳಾದ ರಾಣಿಸತೀಶ್, ಜಯಮಾಲ,ಮುಖ್ಯಮಂತ್ರಿ ಚಂದ್ರು, ಜಿ.ಪಂ.ಸದಸ್ಯೆ ಶಾಂತಲರಾಜಣ್ಣ, ಕೆಪಿಸಿಸಿ ಕಾರ್ಯದರ್ಶಿ ನಾಗಲಕ್ಷ್ಮಿ ಚೌದ್ರಿ, ಜಿಲ್ಲಾ ಮಹಿಳಾ ಅಧ್ಯಕ್ಷ ಇಂದಿರಾದೇನಾನಾಯ್ಕ್, ಪ್ರಧಾನ ಕಾರ್ಯದರ್ಶಿ ಕವಿತಾ, ಮಂಜುಳಾಆರಾಧ್ಯ, ತಾಲೂಕು ಅಧ್ಯಕ್ಷ ಜಯಮ್ಮ, ತಾಪಂ. ಉಪಾಧ್ಯಕ್ಷೆ ನರಸಮ್ಮ, ಸದಸ್ಯ ಸುಮಾ, ಜ್ಯೋತಿ, ಪ.ಪಂ.ಅಧ್ಯಕ್ಷೆ ಬರ್ಜಿಸ್‍ಮುಕ್ತಿಯಾರ್, ಗ್ರಾ.ಪಂ.ಅಧ್ಯಕ್ಷರುಗಳಾಗ ಮಂಜುಳಾ, ಲಕ್ಷ್ಮೀ, ಮಂಜುಳಾ ಪ್ರಸಾದ್, ಸುಮೀತ್ರಾ ಸೇರಿದಂತೆ ಇನ್ನಿತರರು ಹಾಜರಿದ್ದರು







