ಶ್ರೀಮಂತಿಕೆ ಪೂಜಿಸುವ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ : ಸಂತೋಷ್ ಹೆಗ್ಡೆ

ಬೆಂಗಳೂರು, ಡಿ. 17: ಶ್ರೀಮಂತಿಕೆ ಹಾಗೂ ಅಧಿಕಾರ ಪೂಜಿಸುವ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ ಎಂದು ಲೋಕಾಯುಕ್ತ ನಿವೃತ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ತುಳುಕೂಟದಿಂದ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ತುಳುನಾಡು ಉತ್ಸವ’ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಜೈಲಿಗೆ ಹೋಗಿದ್ದಾರೆ ಎಂದು ಅವಮಾನ ಎಂದು ಭಾವಿಸುತ್ತಿದ್ದರು. ಆದರೆ, ಇಂದಿನ ಸಮಾಜದಲ್ಲಿ ಜೈಲಿಗೆ ಹೋಗಿ ಬಂದವರನ್ನು ಹೂ ಹಾರ ಹಾಕಿ, ಮೆರವಣಿಗೆ ಮಾಡಿಕೊಂಡು ಕರೆ ತರುತ್ತಾರೆ. ತಪ್ಪು ಮಾಡುವವರನ್ನು ವಿಜೃಂಭಿಸುತ್ತಿದ್ದಾರೆ ಎಂದು ನುಡಿದರು.
ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಮರೆಯಾಗುತ್ತಿದೆ ಎಂದ ಅವರು, ಮನುಷ್ಯನಿಗೆ ತೃಪ್ತಿ ಇಲ್ಲದಿರುವುದರಿಂದ ದುರಾಸೆ ಹೆಚ್ಚಾಗಿ ಅದರಿಂದ ಪ್ರಲೋಭನೆಗೆ ಒಳಗಾಗಿ ಮನುಷ್ಯ ಭ್ರಷ್ಟಾಚಾರ ಸೇರಿದಂತೆ ಅನೇಕ ಕೆಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ದುರಾಸೆ ಮತ್ತು ಅಮಾನವೀಯ ಆಗುವ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದ ಅವರು, ಮನುಷ್ಯನಿಗೆ ತೃಪ್ತಿ ಮತ್ತು ಮಾನವೀಯತೆ ಅತಿ ಅಗತ್ಯವಾಗುತ್ತದೆ. ಕಷ್ಟದಲ್ಲಿರುವವರಿಗೆ ಸಾಧ್ಯವಾದರೆ ಸಹಾಯ ಮಾಡಿ, ಇಲ್ಲದಿದ್ದರೆ ತೊಂದರೆ ಕೊಡಬೇಡಿ ಎಂದು ಅವರು ತಿಳಿಸಿದರು.
ಇದೇ ವೇಳೆ ಸಾಹಿತ್ಯ, ಕ್ರೀಡೆ, ಸಿನಿಮಾ, ಕಾನೂನು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರಿ, ನ್ಯಾ.ಎನ್. ಸಂತೋಷ ಹೆಗ್ಡೆ, ಮನೋಹರ, ಮಮತಾ ಪೂಜಾರಿ, ಸರ್ವೋತ್ತಮ ಶೆಟ್ಟಿ ಇವರಿಗೆ ತಾಳವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಯ್ಯ, ತುಳುಕೂಟದ ಅಧ್ಯಕ್ಷ ಕೆ.ಜಯರಾಮ್ ಸೂಡ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ವಿ.ರಾಜೇಂದ್ರ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







