ಕೋಲಾರ : ಎನ್‍ಪಿಎಸ್ ನೌಕರರ ಸಂಘದಿಂದ ವಿಚಾರ ಸಂಕಿರಣ ಕಾರ್ಯಕ್ರಮ

ಕೋಲಾರ,ಡಿ.17: ನಗರದ ಗಾಂಧಿವನದಲ್ಲಿ ಮಹಾತ್ಮಗಾಂಧಿಗೆ ಮಾಲಾರ್ಪಣೆ ಮಾಡಿ ಎಂ.ಜಿ.ರಸ್ತೆಯ ಮುಖಾಂತರ ರಂಗಮಂದಿರ ತನಕ ರ್ಯಾಲಿ ನಡೆಸಿದ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದಿಂದ ರಂಗಮಂದಿರದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಂಡಿತು.
ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ ವೈ.ರಾಮಕ್ಕ ಮಾತನಾಡಿ `ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋರಾಟದಿಂದ ಮಾತ್ರ ಸಾಧ್ಯ ಎಂದು ಶಾಸಕಿ ವೈ.ರಾಮಕ್ಕ ಅಭಿಪ್ರಾಯಪಟ್ಟರು.
ನಗರದಲ್ಲಿ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದಿಂದ ಭಾನುವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಎನ್‍ಪಿಎಸ್ ನೌಕರರ ಜಾಗೃತಿ ಸಮಾವೇಶ ಮತ್ತು ವಿಚಾರ ಸಂಕಿರಣದಲ್ಲಿ ನೌಕರರಿಗೆ ಸಮರ್ಪಕವಾಗಿ ಸೌಕರ್ಯಗಳನ್ನು ಕಲ್ಪಿಸದ ಹಿನ್ನಲೆಯಲ್ಲಿ ಕೆಲಸಕ್ಕೆ ರಕ್ಷಣೆಯಿಲ್ಲದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆಲ್ಲಾ ನೂತನವಾಗಿ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಯೇ ಕಾರಣವಾಗಿದೆ ಎಂದು ವಿಷಾದಿಸಿದರು.
ನೂತನ ಪಿಂಚಣಿ ಯೋಜನೆಯ ಬಗ್ಗೆ ರಾಜ್ಯದ ಸಂಸದರಾದ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ ಹಾಗೂ ಆನಂತಕುಮಾರ್ ಅವರಿಗೆ ಮಾಹಿತಿ ನೀಡಿ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
`ಸರ್ಕಾರಿ ನೌಕರರಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಿ ಕೆಲಸ ಮಾಡಿಸಿಕೊಳ್ಳುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ' ಎಂದು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ದೂರಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಜಕಾರಣ ಶಾಶ್ವತವಲ್ಲ, ಕಾರ್ಯಾಂಗದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಸೌಕರ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಶಾಸಕಾಂಗದ ಮೇಲಿದೆ. ಆದರೆ ಸಂಸತ್ ಹಾಗೂ ಸದನದಲ್ಲಿ ಚಿಂತಕರ ಸಂಖ್ಯೆ ಕಡಿಮೆಯಾಗಿದ್ದು, ಸ್ವಾರ್ಥಿಗಳೇ ಹೆಚ್ಚಾಗಿರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಾಂಗ ಶಾಶ್ವತ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕಾಗಿತ್ತು. ನೌಕರರ ಶೇ.10ರಷ್ಟು ಪಿಂಚಣಿ ಕಡಿತಗೊಳಿಸಿಕೊಂಡು ಶೇರು ಮಾರುಕಟ್ಟೆಗಲ್ಲಿ ಠೇವಣಿ ಇಡುವದರಿಂದ ಏನು ಲಾಭಸಿಗುತ್ತದೆ ಎಂದು ಪ್ರಶ್ನಿಸಿದರು.
ಶೇರು ಮಾರುಕಟ್ಟೆಗಳು ಅಡ್ಡಗೋಡೆಯ ಮೇಲೆ ದೀಪ ಇದ್ದಂತೆ. ಯಾವಾಗ ಲಾಭಗಳಿಸುತ್ತವೊ, ಯಾವಾಗ ದಿವಾಳಿಯಾಗುತ್ತವೊ ಗೊತ್ತಿಲ್ಲ. ಪಿಂಚಣಿ ಕಡಿತಗೊಳಿಸಿಕೊಂಡು ಎಲ್ಲೊ ಠೇವಣಿ ಇಡುವ ಬದಲು ನೌಕರರಿಗೆ ಸಮಾಧಾನವಾಗುವ ರೀತಿ ಸೌಕರ್ಯಗಳನ್ನು ಕಲ್ಪಿಸಿದರೆ ಹೆಚ್ಚಿಗೆ ಕೆಲಸ ಮಾಡಿಸಿಕೊಳ್ಳಬಹುದು. ಇಲ್ಲದಿದ್ದರೆ ನೌಕರರು ಭ್ರಷ್ಟಚಾರಿಗಳಾಗಲು ಅವಕಾಶ ನೀಡದಂತಾಗುತ್ತದೆ ಎಂದು ಹೇಳಿದರು.
ನೌಕರರಲ್ಲಿ ಹಲವು ವಿಭಾಗಗಳಿವೆ. ಎಲ್ಲಾರಿಗೂ ಒಂದೇ ರೀತಿ ವೇತನ ಬರುವುದಿಲ್ಲ. ಅವರು ಸೇವೆಯಿಂದ ನಿವೃತ್ತಿಯಾದ ನಂತರ ನೆಮ್ಮದಿ ಬದುಕು ನಡೆಸಲು ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಅವರಿಗೆ ರಕ್ಷಣೆ ಕಲ್ಪಿಸದಿದ್ದರೆ ದೇಶ, ರಾಜ್ಯ ಅಭಿವೃದ್ಧಿಯಾಗುವುದಿಲ್ಲ. ಈ ಹಿಂದೆ ಯೋಜನೆಯನ್ನು ಮುಂದುವರೆಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದೆ. ನಿಮ್ಮ ಹೋರಾಟಕ್ಕೆ ಜಯ ಸಿಗುತ್ತದೆ. ವಿದ್ಯಾರ್ಥಿ ಸಂಘಟನೆಗಳನ್ನು ನಿಮ್ಮೊಟ್ಟಿಗೆ ತೊಡಗಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಚಳವಳಿ ನಡೆಸಿ. ಜ.5ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲು ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಆರ್.ನಾಗಮಣಿ ಮಾತನಾಡಿ, `ನೂತನ ಪಿಂಚಣಿ ಯೋಜನೆ ಜಾರಿಗೆ ತಂದ ಮೇಲೆ ನೌಕರರಿಗೆ ರಕ್ಷಣೆಯಿಲ್ಲದಂತಾಗಿದ್ದು, ಈ ಯೋಜನೆಯನ್ನು ರದ್ದುಗೊಳಿಸಲು ಹಂತಹಂತವಾಗಿ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ' ಎಂದು ಹೇಳಿದರು.
ಸರ್ಕಾರಗಳು ಎನ್‍ಪಿಎಸ್ ಯೋಜನೆ ರದ್ದುಗೊಳಿಸದಿದ್ದರೆ ಜನವರಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನಾ ನಗರದ ಗಾಂಧಿ ಉದ್ಯಾನದಿಂದ ರಂಗಮಂದಿರದತನಕ ಎನ್‍ಪಿಎಸ್ ಯೋಜನೆ ವಿರೋಧಿಸಿ ಮೆರವಣಿಗೆ ನಡೆಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಾಂತಾರಾಮ, ಗೌರವ ಸಲಹೆಗಾರ ಎಸ್.ಎಸ್.ಹದ್ಲಿ, ಜಿಲ್ಲಾ ಘಟಕದ ಗೌರವ ಸಲಹೆಗಾರ ನಂದೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್‍ಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಮಂಜುನಾಥ್, ಖಜಾಂಚಿ ರವಿಚಂದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ್ ಹಾಜರಿದ್ದರು.







