ಕಾರ್ಮಿಕರ ವಿವಿಧ ಯೋಜನೆಗಳಿಗೆ 3 ಸಾವಿರ ಕೋಟಿ ರೂ. ಬಳಕೆ : ಡಿ.ಲಕ್ಷ್ಮಿವೆಂಕಟೇಶ್

ಮಂಡ್ಯ, ಡಿ.17: ಸರಕಾರ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಸುಮಾರು 3 ಸಾವಿರ ಕೋಟಿ ರೂ.ನಷ್ಟು ಹಣವನ್ನು ವಿವಿಧ ಯೋಜನೆಗಳಿಗೆ ಬಳಸುತ್ತಿದೆ ಎಂದು ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಐಎನ್‍ಟಿಯುಸಿ) ಪ್ರಧಾನ ಕಾರ್ಯದರ್ಶಿ ಡಿ.ಲಕ್ಷ್ಮಿವೆಂಕಟೇಶ್ ಹೇಳಿದ್ದಾರೆ.
ನಗರದ ಗುರುರಾಜ ಕಾಂಟಿನೆಂಟಲ್ ಸಭಾಂಗಣದಲ್ಲಿ ಜಿಲ್ಲಾ ಮಜ್ದೂರ್ ಕಾಂಗ್ರೆಸ್ ವತಿಯಿಂದ ರವಿವಾರ ನಡೆದ ಜಿಲ್ಲಾ ಮಜ್ದೂರ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಎಐಸಿಸಿ ನೂತನ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಅಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಜಾರಿಗೊಳಿಸಿರುವ ಹಲವಾರು ಕಾರ್ಯಕ್ರಮಗಳ ಜತೆಗೆ, ಕಾರ್ಮಿಕ ನಿಧಿಯಿಂದಲೂ ವಿವಿಧ ಯೋಜನೆಗಳು ಇವೆ. ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗವಾದ ಮಜ್ದೂರ್ ಕಾಂಗ್ರೆಸ್ ಘಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಲಿಷ್ಠವಾಗಿದ್ದು, ಸಕ್ರಿಯ ಕಾರ್ಯಕರ್ತರಿದ್ದಾರೆ. ಈ ಘಟಕಕ್ಕೆ ಪಕ್ಷ ಮತ್ತಷ್ಟು ಸಹಕಾರ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.
ಮಹಿಳೆಯರೂ ಸೇರಿದಂತೆ ಸಾವಿರಾರು ಮಂದಿ ಮಜ್ದೂರ್ ಕಾಂಗ್ರೆಸ್‍ನಲ್ಲಿ ದುಡಿಯುತ್ತಿದ್ದಾರೆ. ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸರಕಾರದ ಕಾರ್ಯಕ್ರಮಗಳನ್ನು ಪ್ರಚುರಪಡಿಸಿ ಪಕ್ಷವನ್ನು ಸಂಘಟಿಸಬೇಕು ಎಂದು ಅವರು ಕರೆ ನೀಡಿದರು.
ರಾಹುಲ್‍ಗಾಂಧಿ ಅವರು ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ ಅವರು, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಸಾಮಥ್ರ್ಯ ರಾಹುಲ್ ಅವರಿಗಿದೆ. ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಹಿರಿಯ ಉಪಾಧ್ಯಕ್ಷ ಪುಟ್ಟಸ್ವಾಮಿ, ಮಜ್ದೂರ್ ಕಾಂಗ್ರೆಸ್‍ನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮುದ್ದಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್, ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಡಿ. ಸುದರ್ಶನ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಪುಟ್ಟೇಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.







