‘ಹೈದರಬಾದ್ ವಿಜಯ’ ತಾಳಮದ್ದಳೆ: 70ವರ್ಷಗಳ ಇತಿಹಾಸ ಮರುಸೃಷ್ಠಿ

ಉಡುಪಿ, ಡಿ.17: ಉಡುಪಿ ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ 1948 ರಲ್ಲಿ ನಡೆದ ನವಭಾರತ ದೈನಿಕದ ಸಂಪಾದಕರಾಗಿದ್ದ ಎಂ.ವಿ.ಹೆಗ್ಡೆ ರಚಿಸಿ ಪ್ರಕಟಿಸಿದ ‘ಹೈದರಬಾದ್ ವಿಜಯ’ ಯಕ್ಷಗಾನ ತಾಳಮದ್ದಳೆಯು ಇದೀಗ 70ವರ್ಷಗಳ ಬಳಿಕ ಇಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನಡೆದ ಈ ಇತಿಹಾಸದ ಮರುಸೃಷ್ಠಿ ಕಾರ್ಯಕ್ರಮಕ್ಕೆ ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ರಾಜಾಂಗಣದಲ್ಲಿ ನಡೆದ ಪತ್ರಕರ್ತ ಎಂ.ವಿ.ಹೆಗ್ಡೆ ಯಕ್ಷನಮನ ಕಾರ್ಯಕ್ರಮವನ್ನು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹೈದರಬಾದ್ ಭಾರತದೊಂದಿಗೆ ವಿಲೀನ ಮಾಡುವಲ್ಲಿ ನೆಹರೂಗಿಂತ ಸರ್ದಾರ್ ವಲ್ಲಭಬಾಯಿ ಪಟೇಲ್ ಪಾತ್ರ ಪ್ರಮುಖ. ನೆಹರೂ ಈ ವಿಚಾರದಲ್ಲಿ ವಿದೇಶ ನೀತಿಗೆ ಅಂಜಿ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಿರಲಿಲ್ಲ. ಆದರೆ ಪಟೇಲ್ ಸೈನ್ಯವನ್ನು ನುಗ್ಗಿಸಿ ಹೈದರಬಾದ್ ಭಾರತದೊಂದಿಗೆ ವಿಲೀನವಾಗಲು ಕ್ರಮ ತೆಗೆದುಕೊಂಡರು ಎಂದರು.
ಅಧ್ಯಕ್ಷತೆಯನ್ನು ಡಾ.ಎಂ.ಮೋಹನ್ ಆಳ್ವ ವಹಿಸಿದ್ದರು. ಶ್ರೀಕ್ಷೇತ್ರ ಕಟೀಲಿನ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಎಂ.ವಿ.ಹೆಗ್ಡೆಯ ಪುತ್ರ ಡಾ.ವೈ.ಸನತ್ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಸಂಯೋಜಕ ಸುಧಾಕರ ಆಚಾರ್ಯ, ಸಲಹೆಗಾರರಾದ ಎಂ.ಎಲ್.ಸಾಮಗ, ಭುವನ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.







