ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ: ಸಿಎಂ ಸಿದ್ದರಾಮಯ್ಯ

ಯಾದಗಿರಿ, ಡಿ.17: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಎಂಬುವುದಕ್ಕೆ ಸಾಧನಾ ಸಮಾವೇಶಗಳಲ್ಲಿ ಸೇರುತ್ತಿರುವ ಹೈ-ಕರ್ನಾಟಕ ಭಾಗದ ಜನತೆಯೇ ಸಾಕ್ಷಿಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಲ್ಲಿನ ಹುಣಸಗಿಯಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನವ ಕರ್ನಾಟಕ ನಿರ್ಮಾಣಕ್ಕೆ ಹೈ-ಕರ್ನಾಟಕದ ಜನತೆ ನಮ್ಮ ಜೊತೆಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಏನನ್ನೂ ಮಾಡಿಲ್ಲ. ಹೀಗಾಗಿ ಧರ್ಮ ಹಾಗೂ ಜಾತಿಗಳ ಮಧ್ಯೆ ಧ್ವೇಷವನ್ನು ಬಿತ್ತುತ್ತಿದ್ದಾರೆ. ಇದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರೇ ಪ್ರೇರಣೆಯಾಗುತ್ತಿರುವುದು ದೊಡ್ಡ ದುರಂತವಾಗಿದೆ. ಇದಕ್ಕೆ ರಾಜ್ಯದ ಜನತೆ ಅವಕಾಶ ಕೊಡದೆ, ಬಿಜೆಪಿಯನ್ನು ಯಾವುದೇ ಕಾರಣಕ್ಕೆ ಗೆಲ್ಲಿಸಬಾರದು ಎಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಿ ಆ ಮೂಲಕ ಲಾಠಿ ಚಾರ್ಜ್, ಗೋಲಿಬಾರ್ ಆಗುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ. ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಹೋರಾಡಲಿದೆ. ಇದಕ್ಕೆ ಜನತೆಯ ಆಶೀರ್ವಾದಬೇಕೆಂದು ಅವರು ಮನವಿ ಮಾಡಿದರು.
ಹೈ-ಕರ್ನಾಟಕದ ಭಾಗಕ್ಕೆ ವಿಶೇಷ ಸ್ಥಾನ,ಮಾನದಡಿ ಸುಮಾರು 50 ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಅದರಲ್ಲಿ 23ಸಾವಿರ ಹುದ್ದೆಯನ್ನು ತುಂಬಲಾಗಿದ್ದು, ಉಳಿದ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು. ಇದರ ಜೊತೆಗೆ ನೀರಾವರಿ ಯೋಜನೆಗೆ ಕೇವಲ ಹೈ-ಕರ್ನಾಟಕದ ಭಾಗಕ್ಕೆ 20 ಸಾವಿರಕ್ಕೂ ಹೆಚ್ಚು ಅನುದಾನವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನೀರಾವರಿ ಸಚಿವ ಎಂ.ಬಿ.ಪಾಟೀಲ್, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ರಾಜಾ ವೆಂಕಟಪ್ಪನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಮಹಾತ್ಮಾ ಗಾಂಧೀಜಿಯನ್ನು ಕೊಂದ, ಈ ದೇಶದ ಮೊದಲ ಭಯೋತ್ಪಾದಕ ಆರೆಸ್ಸೆಸ್ ನಾಯಕ ನಾಥೂರಾಮ್ ಗೋಡ್ಸೆಯ ದೇವಸ್ಥಾನವನ್ನು ಕಟ್ಟಲು ಮುಂದಾಗಿದೆ.ಇದಕ್ಕಿಂತ ನಾಚಿಗೆಟ್ಟ ಕೆಲಸ ಮತ್ತೊಂದಿಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿಮುಂದಿನ ಜನವರಿಯಿಂದ 50ತಾಲೂಕುಗಳು ಅಸ್ತಿತ್ವಕ್ಕೆ ಬರಲಿದೆ. ಹೊಸ ತಾಲೂಕುಗಳಿಗೆ ಅಗತ್ಯವಾದ ಎಲ್ಲ ಮೂಲಭೂತ ಸೌಕರ್ಯಗಳಿಗೆ ಸರಕಾರ ಅನುದಾನವನ್ನು ಬಿಡುಗಡೆಮಾಡಿದೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ







