ಗ್ರಾಚ್ಯುವಿಟಿ ಪಾವತಿ ಕಾಯ್ದೆ ತಿದ್ದುಪಡಿಗೆ ಮಸೂದೆ

ಹೊಸದಿಲ್ಲಿ, ಡಿ. 18: ಕೇಂದ್ರ ಕಾನೂನು ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳ ಗ್ರಾಚ್ಯುವಿಟಿ ಹಾಗೂ ಹೆರಿಗೆ ರಜೆ ಅವಧಿ ಅಧಿಸೂಚಿಸಲು ಅವಕಾಶ ನೀಡುವ ಮಸೂದೆಯನ್ನು ಸರಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿತು.ವಿರೋಧ ಪಕ್ಷಗಳ ಘೋಷಣೆ ಹಾಗೂ ಬಿಜೆಪಿಯ ಪ್ರತಿ ಘೋಷಣೆಗಳ ನಡುವೆ ಗ್ರಾಚ್ಯುವಿಟಿ ಪಾವತಿ (ತಿದ್ದುಪಡಿ) ಮಸೂದೆ 2017ನ್ನು ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಮಂಡಿಸಿದರು.
ಕಾರ್ಖಾನೆ, ಗಣಿ, ತೈಲಬಾವಿ, ತೋಟ, ಬಂದರು, ರೈಲ್ವೆ ಕಂಪೆನಿ, ಅಂಗಡಿ ಹಾಗೂ ಇತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಗ್ರಾಚ್ಯುವಿಟಿಯನ್ನು ಗ್ರಾಚ್ಯುವಿಟಿ ಪಾವತಿ (ತಿದ್ದುಪಡಿ) ಮಸೂದೆ-2017 ಒದಗಿಸಲಿದೆ. 10ಕ್ಕಿಂತ ಅಧಿಕ ಜನರಿರುವ ಸಂಸ್ಥೆಗಳಲ್ಲಿ 5ಕ್ಕಿಂತ ಹೆಚ್ಚು ವರ್ಷ ಕೆಲಸ ಮಾಡಿದ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ.ಈ ತಿದ್ದುಪಡಿ ಮಹಿಳಾ ಉದ್ಯೋಗಿಗಳ 12 ವಾರಗಳಿದ್ದ ಹೆರಿಗೆ ರಜೆಯನ್ನು ವಿಸ್ತರಿಸಲಿದೆ. ಹಾಗೂ ಗರಿಷ್ಠ 26 ವಾರಗಳ ಹೆರಿಗೆ ರಜೆಗೆ ಅವಕಾಶ ನೀಡಲಿದೆ. ಸಂಪೂರ್ಣಗೊಂಡ ಸೇವೆಯ ಪ್ರತಿವರ್ಷದ 15 ದಿನದ ವೇತನ ಸೂತ್ರದ ಆಧಾರದಲ್ಲಿ ಗ್ರಾಚ್ಯುವಿಟಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತಿತ್ತು. ಅದು 10 ಲಕ್ಷದ ಮಿತಿಗೆ ಒಳಪಟ್ಟಿತ್ತು. ಈ ಮಿತಿಯನ್ನು 2010ರಲ್ಲಿ ನಿಗದಿಪಡಿಸಲಾಗಿತ್ತು.
7ನೇ ವೇತನ ಆಯೋಗದ ಅನುಷ್ಠಾನದ ಬಳಿಕ, ಕೇಂದ್ರ ಸರಕಾರದ ಗ್ರಾಚ್ಯುವಿಟಿ ಮೊತ್ತದ ಮಿತಿ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆಯಾಗಿದೆ.





